ವಾಯುಗೋಳ

 ವಾಯುಗೋಳ

ಭೂಮಿಯ ಮೇಲ್ಮೈಯಲ್ಲಿ ವಾಯುವಿನಿಂದ ಕೂಡಿದ ಭಾಗವೇ ವಾಯುಮಂಡಲ. ಇದರಲ್ಲಿ ಮುಖ್ಯವಾಗಿ ಸಾರಜನಕ (78%), ಆಮ್ಲಜನಕ (21%), ಆರ್ಗಾನ್ (0.93%) ಮತ್ತು ಇಂಗಾಲ (0.03%) ಕಂಡುಬರುತ್ತವೆ.

ಹವಾಮಾನ : ಒಂದು ನಿರ್ದಿಷ್ಟ ಪ್ರದೇಶದ ಒಂದು ನಿರ್ದಿಷ್ಟ ಕಾಲದ ವಾಯುಮಂಡಲದ ಸ್ಥಿತಿಯನ್ನು ಹವಾಮಾನ ಎನ್ನುವರು. ಹವಾಮಾನದ ಕುರಿತಾದ ಅಧ್ಯಯನವನ್ನು ಹವಾಗುಣಶಾಸ್ತ್ರ (ಮೀಟಿಯರಾಲಜಿ) ಎನ್ನುವರು. ಇದು ಅಲ್ಪಕಾಲಾವಧಿಯದಾಗಿರುತ್ತದೆ. ಒಂದು ದಿನ, ಒಂದು ವಾರ ಅಥವಾ ಒಂದು ತಿಂಗಳು.

ವಾಯುಗುಣ : ಒಂದು ಪ್ರದೇಶದ ದೀರ್ಘಾವಧಿಯ ಹವಾಮಾನದ ಸರಾಸರಿಯನ್ನು ಅಥವಾ ಸಾಮಾನ್ಯ ಪರಿಸ್ಥಿತಿಯನ್ನು ವಾಯುಗುಣಶಾಸ್ತ್ರ (ಕ್ಲೈಮೆಟಾಲಜಿ) ಎನ್ನುವರು. ಸಾಮಾನ್ಯವಾಗಿ 30 ರಿಂದ 40 ವರ್ಷಗಳ ಅವಧಿಯದ್ದಾಗಿರುತ್ತದೆ.

ವಾಯುಗುಣದ ಮೇಲೆ ಅಕ್ಷಾಂಶ ಮತ್ತು ಭೌಗೋಳಿಕ ಸ್ಥಾನಮಾನ, ಸಾಗರ ಪ್ರವಾಹಗಳು, ಭೂಸ್ವರೂಪ, ಸಮುದ್ರದಿಂದಿರುವ ದೂರ ಮತ್ತು ಸಮುದ್ರಮಟ್ಟದಿಂದ ಇರುವ ಎತ್ತರ, ಜ್ವಾಲಾಮುಖಿಗಳು ಮುಂತಾದವುಗಳು ಪ್ರಭಾವ ಬೀರುತ್ತವೆ. ಈ ವಾಯುಗುಣ ಎಂಬ ಪದವನ್ನು ಮೊದಲಬಾರಿಗೆ ಅಲೆಗ್ಸಾಂಡರ್ ವಾಮ್ ಹಂಬೋಲ್ಟ್ ಎಂಬಾತ ಬಳಸಿದನು.

ವಾಯುಮಂಡಲದ ವಲಯಗಳು

1. ಪರಿವರ್ತನಾ ಮಂಡಲ (Troposphere) : ಭೂಮಿಯ ವಾಯುಗೋಳದ ಅತ್ಯಂತ ಕೆಳಗಿನ ಪದರವನ್ನು ಪರಿವರ್ತನಾ ಮಂಡಲ (ಹವಾಗೋಳ) ಎನ್ನುವರು. ನೀರಾವಿ, ನೈಟ್ರೂಜನ್, ಅಕ್ಸಿಜನ್, ಧೂಳಿನ ಕಣಗಳು ಈ ಪ್ರದೇಶದಲ್ಲಿ ಹೇರಳವಾಗಿ ಕಂಡು ಬರುತ್ತವೆ. ಆದ್ದರಿಂದ ಈ ಪದರವು ಅಧಿಕ ಸಾಂದ್ರತೆಯಿಂದ ಕೂಡಿರುತ್ತದೆ, ಮಿಶ್ರವಲಯ ಎಂಬುದು ಇದಕ್ಕಿರುವ ಮತ್ತೊಂದು ಹೆಸರು.

ಈ ಮಂಡಲವು ಸಮಭಾಜಕ ವೃತ್ತದ ಮೇಲೆ 18 ಕಿ.ಮೀ ಮತ್ತು ಧ್ರುವಗಳ ಮೇಲೆ 8 ಕಿ.ಮೀ ಎತ್ತರದಲ್ಲಿ ಕಂಡುಬರುತ್ತದೆ. ಚಳಿಗಾಲಕ್ಕಿಂತ ಬಿಸಿಲುಕಾಲದಲ್ಲಿ ಇದರ ವ್ಯಾಪ್ತಿ ಹೆಚ್ಚಾಗಿರುತ್ತದೆ. ಉಷ್ಣಾಂಶ ಹೆಚ್ಚಿದಂತೆ ಉಂಟಾಗುವ ಪ್ರಚಲನ ಪ್ರವಾಹಗಳಿಂದ ಇದರ ವ್ಯಾಪ್ತಿಯಲ್ಲಿ ಏರುಪೇರು ಉಂಟಾಗುತ್ತಿರುತ್ತದೆ. ಈ ವಲಯವನ್ನು ವಾಯುಸ್ಥಿತಿಯ ಪ್ರಜನಕ/ಉತ್ಪಾದಕ ಎಂದು ಕರೆಯುವರು.

ಪರಿವರ್ತನಾ ಮಂಡಲದಲ್ಲಿ ಭೂಮೇಲ್ಮೈಯಿಂದ ಮೇಲಕ್ಕೆ ಹೋದಂತೆಲ್ಲಾ ಪ್ರತಿ 1000 ಮೀಟರ್ ಗೆ 6.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಡಿಮೆಯಾಗುತ್ತಾ ಹೋಗುವುದು. ಹೀಗಾಗಿಯೇ ಎತ್ತರದ ಪರ್ವತ ಪ್ರದೇಶಗಳಲ್ಲಿ ಉಷ್ಣಾಂಶ ಕಡಿಮೆಯಿರುತ್ತದೆ. 

2. ಸ್ತರಮಂಡಲ (Stratosphere) : ಪರಿವರ್ತನಾ ಮಂಡಲದ ಮೇಲ್ಭಾಗದ ಪದರವನ್ನು ಸ್ತರಗೋಳ ಎನ್ನುವರು. ಸಮೋಷ್ಣಮಂಡಲ ಎಂಬುದು ಇದಕ್ಕಿರುವ ಮತ್ತೊಂದು ಹೆಸರು. ಈ ಪದರವು 18 ರಿಂದ 50 ಕಿ.ಮೀ ವರೆಗು ಎತ್ತರದಲ್ಲಿ ಹರಡಿದೆ. ಸ್ತರಗೋಳದ ಕೆಳಗಿನ ಭಾಗದಲ್ಲಿ ಅಪಾಯಕಾರಿ ನೇರಳಾತೀತ ವಿಕಿರಣಗಳ ವಿರುದ್ಧ ರಕ್ಷಾಕವಚದಂತೆ ವರ್ತಿಸುವ ಓಝೋನ್ ಪದರವಿದೆ. ಓಝೋನ್ ಪದರವು ಆಮ್ಲಜನಕದಿಂದಾಗಿದ್ದು O3 ಎಂಬುದು ಇದರ ಸಂಕೇತ . ಈ ಪದರದಲ್ಲಿ ಮೋಡಗಳು ಕಂಡುಬರುವುದಿಲ್ಲ ಆದರೆ ಸ್ವಲ್ಪ ಪ್ರಮಾಣದ ನೀರಾವಿ ಹಾಗೂ ದೂಳಿನ ಕಣಗಳು ಕಂಡುಬರುತ್ತವೆ. ಜೆಟ್ ವಿಮಾನಗಳು ಈ ವಲಯದ ಕೆಳಗೆ ಹಾರಾಡುತ್ತವೆ.

3. ಮಧ್ಯಮಂಡಲ (Mesosphere) : ಸ್ತರಗೋಳದಿಂದ ಮೇಲೆ ಸು 50 ರಿಂದ 80 ಕಿ.ಮೀ ಎತ್ತರದಲ್ಲಿರುವ ಪ್ರದೇಶವನ್ನು ಮಧ್ಯಗೋಳ ಎನ್ನುವರು. ಇದು ವಾಯುಮಂಡಲದ ಅತ್ಯಂತ ತಂಪು ಪ್ರದೇಶವಾಗಿದೆ. ಇದನ್ನು ರಾಸಾಯನಿಕ ವಲಯವೆಂದು ಸಹ ಕರೆಯುತ್ತಾರೆ. ಇಲ್ಲಿಯೇ ಹೆಚ್ಚಿನ ಉಲ್ಕೆಗಳು ಘರ್ಷಣೆ ಹೊಂದಿ ಉರಿದು ಬೂದಿಯಾಗುತ್ತವೆ.

4. ಅಯಾನುಮಂಡಲ (Thermosphere) : ಮಧ್ಯಗೋಳದ ನಂತರ ಇರುವ ಪದರವನ್ನು ಅಯಾನುಗೋಳ ಎನ್ನುವರು. ಸು 80 ರಿಂದ 400 ಕಿ.ಮೀ ವರೆಗಿನ ಎತ್ತರದಲ್ಲಿ ಕಂಡುಬರುವ ಈ ವಲಯ ಅಯಾನು ಅಥವಾ ಆವೇಶಭರಿತ ಕಣಗಳಿಂದ ಆಗಿದೆ. ಅತಿ ಹೆಚ್ಚು ಉಷ್ಣಾಂಶದ ಕಾರಣ ಇದನ್ನು ಉಷ್ಣಮಂಡಲ ಎಂತಲೂ ಕರೆಯುವರು.

ಈ ಮಂಡಲವು ಭೂಮಿಯಿಂದ ಬರುವ ರೇಡಿಯೂ ವಿಕಿರಣಗಳನ್ನು ಪ್ರತಿಫಲಿಸುತ್ತದೆ. ಇಲ್ಲಿ D, E, F1, F2 ಎಂಬ ನಾಲ್ಕು ಸ್ಥರಗಳು ಕಂಡುಬರುತ್ತವೆ. D ಸ್ಥರವು ದೀರ್ಘ ತರಂಗಾಂತರಗಳನ್ನು, E ಸ್ಥರವು ಮಧ್ಯಮ ತರಂಗಾಂತರಗಳನ್ನು, F1, F2 ಸ್ಥರವು ಕಡಿಮೆ ತರಂಗಾಂತರಗಳನ್ನು ಹೊಂದಿರುತ್ತದೆ. ಧ್ರುವ ಪ್ರದೇಶಗಳಲ್ಲಿ ಕಂಡುಬರುವ ಅರೋರಾಗಳು ಅಯಾನುಮಂಡಲದಲ್ಲಿ ಮೂಡುತ್ತವೆ.

5. ಬಾಹ್ಯಮಂಡಲ (Exosphere) : ಭೂಮಿಯ ವಾಯುಮಂಡಲದ ಅತ್ಯಂತ ಹೊರ ಪದರವನ್ನು ಬಾಹ್ಯಮಂಡಲ ಎನ್ನುವರು. ಇದು ಹಗುರವಾದ ಅನಿಲಗಳಾದ ಹೈಡ್ರೂಜನ್ ಮತ್ತು ಹೀಲಿಯಮ್ ನಿಂದ ಕೂಡಿದೆ. ಈ ಪ್ರದೇಶದಲ್ಲಿ ಕೃತಕ ಉಪಗ್ರಹಗಳು ಸುತ್ತುತ್ತಿವೆ. ಇಲ್ಲಿ ಉಷ್ಣವು ಅಧಿಕವಾಗಿರುತ್ತದೆ. ಈ ಪ್ರದೇಶದಲ್ಲಿನ ಟಿಂಡಾಲ್ ಪರಿಣಾಮದಿಂದ (ದೂಳಿನ ಕಣಗಳ ಚದುರುವಿಕೆ) ಸೂರ್ಯ ಮುಳುಗುವಾಗ ಮತ್ತು ಉದಯಿಸುವಾಗ ಕೆಂಪಾಗಿ ಕಾಣುತ್ತಾನೆ.

ಭೂಮಿಯ ಗುರುತ್ವಾಕರ್ಷಣ ಶಕ್ತಿಯು ವಾಯುಮಂಡಲವನ್ನು ತನ್ನಡೆಗೆ ಸೆಳೆಯುವುದನ್ನು ವಾಯುಮಂಡಲದ ಒತ್ತಡ ಎನ್ನುವರು. ವಾಯುವಿನ ಒತ್ತಡವನ್ನು ವಾಯುಭಾರಮಾಪಕ (ಬಾರೋಮೀಟರ್) ಎನ್ನುವರು. ವಾಯುವಿನ ಒತ್ತಡ 1013 ಮಿಲಿಬಾರ್ ಕಿಂತ ಹೆಚ್ಚಿದ್ದಲ್ಲಿ ಅಧಿಕ ಒತ್ತಡ ಎನ್ನುವರು, 986 ಮಿಲಿಬಾರ್ ಕಿಂತ ಕಡಿಮೆ ಇದ್ದಲ್ಲಿ ಕಡಿಮೆ ಒತ್ತಡ ಎನ್ನುವರು.

ವಾಯುಮಂಡಲದ ಒತ್ತಡವು ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿರುತ್ತದೆ. ಕಡಿಮೆ ಉಷ್ಣಾಂಶವುಳ್ಳ ಸ್ಥಳಗಳಲ್ಲಿ ಅಧಿಕ ಒತ್ತಡ ಹಾಗೂ ಹೆಚ್ಚಿನ ಉಷ್ಣಾಂಶ ಇರುವ ಸ್ಥಳಗಳಲ್ಲಿ ಕಡಿಮೆ ಒತ್ತಡ ಇರುತ್ತದೆ. ವಾಯುವಿನ ಕಡಿಮೆ ಒತ್ತಡದ ಕಾರಣ ಎತ್ತರದ ಪ್ರದೇಶಗಳಲ್ಲಿ ನೀರು ಕುದಿಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಸಮಶೀತೋಷ್ಣ ವಲಯಗಳನ್ನು ಬೇಸಿಗೆ ಮತ್ತು ಚಳಿಗಾಲ ಸಹಿತ ವಲಯ ಅಥವಾ ಋತುಮಾನ ಸಹಿತ ವಲಯ ಎಂದು ಕರೆಯುವರು. ಶೀತವಲಯವನ್ನು ಬೇಸಿಗೆ ರಹಿತ ಋತುಮಾನ ರಹಿತ ವಲಯವೆಂದು ಕರೆಯುವರು.

ಯಾವುದೇ ಕಾಲದಲ್ಲಿಯೇ ಆಗಿರಲಿ 3 ರಿಂದ 4 ಗಂಟೆಯ ಅವಧಿಯಲ್ಲಿ ಅತಿ ಹೆಚ್ಚು ಉಷ್ಣಾಂಶ ಇರುತ್ತದೆ. 4 ರಿಂದ 5 ಗಂಟೆಯ ಒಳಗೆ ಅತಿ ಕಡಿಮೆ ಉಷ್ಣಾಂಶ ಇರುತ್ತದೆ.

ಭೂಮಿಯ ಮೇಲಿನ ಒತ್ತಡ ಪಟ್ಟಿಗಳು

ಭೂಮಿಯ ಮೇಲೆ ಒಟ್ಟು 7 ವಾಯು ಒತ್ತಡ ಪಟ್ಟಿಗಳಿವೆ. ಭೂಮಿಯ ಮೇಲೆ ಹೋದಂತೆಲ್ಲಾ ಪ್ರತಿ 1000 ಮೀಟರ್ ಗೆ 104 ಮಿಲಿಬಾರ್ ನಷ್ಟು ಗಾಳಿಯ ಒತ್ತಡ ಕಡಿಮೆಯಾಗುತ್ತಾ ಹೋಗುತ್ತದೆ.

1. ಸಮಭಾಜಕ ವೃತ್ತದ ಕಡಿಮೆ ಒತ್ತಡ ಪಟ್ಟಿ

ಸಮಭಾಜಕ ವೃತ್ತದಿಂದ ಉತ್ತರಕ್ಕೆ 5 ಡಿಗ್ರಿ ಮತ್ತು ದಕ್ಷಿಣಕ್ಕೆ 5 ಡಿಗ್ರಿ ಅಕ್ಷಾಂಶದೊಳಗಿನ ವಲಯವಾಗಿದೆ. ಇದನ್ನು ಡೋಲ್‍ಡ್ರಮ್ ವಲಯ ಎಂತಲೂ ಕರೆಯುವರು. ಇಲ್ಲಿ ಸೂರ್ಯನ ಕಿರಣಗಳು ನೇರವಾಗಿ ಬೀಳುವುದರಿಂದ ಗಾಳಿಯ ಒತ್ತಡ ಕಡಿಮೆ ಇರುತ್ತದೆ. ಇಲ್ಲಿ ಗಾಳಿ ಸಮತಲವಾಗಿ ಚಲಿಸದೇ ಮೇಲ್ಮುಖವಾಗಿ ಚಲಿಸುವುದರಿಂದ ಇದನ್ನು ಪ್ರಶಾಂತವಲಯ/ಶಾಂತಿಕಟಿಬಂಧ ವಲಯ ಎನ್ನುವರು.

ಈ ವಲಯದಲ್ಲಿ ಉತ್ತರ ಮತ್ತು ದಕ್ಷಿಣ ವ್ಯಾಪಾರಿ/ವಾಣಿಜ್ಯ ಮಾರುತಗಳು ಸಂಧಿಸುವುದರಿಂದ ಇದನ್ನು ಅಂತರ ಉಷ್ಣಸಂಧಿ ಕ್ಷೇತ್ರ ಎಂತಲೂ ಕರೆಯುವರು.

ಉಪಉಷ್ಣವಲಯದ ಹೆಚ್ಚು ಒತ್ತಡ ಪಟ್ಟಿಗಳು

ಈ ವಲಯಗಳು ಉತ್ತರದಲ್ಲಿ ಕರ್ಕಾಟಕ ಸಂಕ್ರಾಂತಿ ವೃತ್ತ ಮತ್ತು ದಕ್ಷಿಣದಲ್ಲಿ ಮಕರ ಸಂಕ್ರಾಂತಿ ವೃತ್ತದ ಆಚೆಗೆ 30 ರಿಂದ 40 ಡಿಗ್ರಿ ಅಕ್ಷಾಂಶಗಳೊಳಗೆ ಕಂಡುಬರುತ್ತವೆ. ಧ್ರುವ ಪ್ರದೇಶಗಳ ಗಾಳಿ ಇಲ್ಲಿಗೆ ಬೀಸಿ ಬರುವುದರಿಂದ ಮತ್ತು ಇಲ್ಲಿ ಸೂರ್ಯನ ಕಿರಣಗಳು ಓರೆಯಾಗಿ ಬೀಳುವುದರಿಂದ ಈ ವಲಯವು ಗಾಳಿಯ ಅಧಿಕ ಒತ್ತಡ ಪಟ್ಟಿಗಳಿಂದ ಕೂಡಿದೆ.

ಇಲ್ಲಿ ಗಾಳಿ ಸಮತಲವಾಗಿ ಚಲಿಸದೇ ಕೆಳಮುಖವಾಗಿ ಚಲಿಸುತ್ತದೆ. ಈ ವಲಯವನ್ನು ಅಶ್ವ ಅಕ್ಷಾಂಶಗಳ ವಲಯ ಎಂತಲೂ ಕರೆಯುವರು. ಈ ವಲಯವು ವಾಣಿಜ್ಯ ಹಾಗೂ ಪ್ರತಿ ವಾಣಿಜ್ಯ ಮಾರುತಗಳ ಉಗಮ ಸ್ಥಾನವಾಗಿದೆ.

ಉಪಧ್ರುವಗಳ ಕಡಿಮೆ ಒತ್ತಡ ಪಟ್ಟಿಗಳು

ಉತ್ತರ ಮತ್ತು ದಕ್ಷಿಣದಲ್ಲಿ 60 ರಿಂದ 70 ಡಿಗ್ರಿ ಅಕ್ಷಾಂಶಗಳ ಮಧ್ಯೆ ಈ ವಲಯಗಳು ಕಂಡುಬರುತ್ತವೆ. ಈ ವಲಯದಲ್ಲಿ ಹೆಚ್ಚಿನ ಉಷ್ಣಾಂಶದ ಕಾರಣ ಮತ್ತು ಭೂಮಿ ಓರೆಯಾಗಿ ಚಲಿಸುವಾಗ ಇಲ್ಲಿನ ಮಾರುತಗಳು ಹೊರಗೆ ಚಿಮ್ಮಲ್ಪಡುವುದರಿಂದ ಕಡಿಮೆ ಗಾಳಿ ಒತ್ತಡವಿರುತ್ತದೆ.

ಧ್ರುವ ಪ್ರದೇಶದ ಹೆಚ್ಚಿನ ಒತ್ತಡ ಪಟ್ಟಿಗಳು

ಅತಿ ಶೀತಸಮಭಾಜಕ ವೃತ್ತದಲ್ಲಿ ಮೇಲೇರಿದ ಮಾರುತಗಳು ಇಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕೆಳಗಿಳಿಯುವದರಿಂದ ಮತ್ತು ಯಾವ ಕಾಲಕ್ಕೂ ಇಲ್ಲಿ ಸೂರ್ಯನ ಕಿರಣಗಳು ಅತ್ಯಂತ ಓರೆಯಾಗಿ ಬೀಳುವ ಕಾರಣ ಈ ವಲಯದಲ್ಲಿ ಗಾಳಿಯ ಒತ್ತಡ ಹೆಚ್ಚಾಗಿರುತ್ತದೆ. ಈ ವಲಯವು ಶೀತಮಾರುತಗಳ ಉಗಮ ಸ್ಥಾನವಾಗಿದೆ.

ಕೋರಿಯಾಲಿಸ್ ಬಲ

ಭೂಮಿಯ ದೈನಂದಿನ ಚಲನೆಯಿಂದ ಮಾರುತಗಳ ಚಲನೆಯ ದಿಕ್ಕಿನಲ್ಲಿ ಬದಲಾವಣೆಯಾಗುತ್ತದೆ ಎಂಬುದನ್ನು ಕೋರಿಯಾಲಿಸ್ ಎಂಬ ವಿಜ್ಞಾನಿ ಪ್ರತಿಪಾದಿಸಿದ. ಮಾರುತಗಳ ದಿಕ್ಕನ್ನು ಬದಲಾಯಿಸುವ ಈ ಬಲವನ್ನು ಕೋರಿಯಾಲಿಸ್ ಬಲ ಎನ್ನುವರು.

ಈ ಬಲದ ಪರಿಣಾಮದಿಂದ ಯಾವುದೇ ಚಲಿಸುವ ವಸ್ತು ಉತ್ತರಾರ್ಧಗೋಳದಲ್ಲಿ ತಮ್ಮ ಬಲಗಡೆಗೂ ಮತ್ತು ದಕ್ಷಿಣಾರ್ಧಗೋಳದಲ್ಲಿ ತಮ್ಮ ಎಡಗಡೆಗೂ ವಿಚಲಿತವಾಗುತ್ತವೆ. ಗಾಳಿ, ಸಾಗರದ ಪ್ರವಾಹಗಳು ಮುಂತಾದವು ವಿಚಲಿತವಾಗಲು ಕಾರಣ ಕೋರಿಯಾಲಿಸ್ ಬಲ.

ಬುಯ್ಸ್ ಬ್ಯಾಲಟ್ ನಿಯಮ

ಉತ್ತರಾರ್ಧ ಗೋಳದಲ್ಲಿ ಬೀಸುವ ಗಾಳಿಗೆ ಬೆನ್ನು ಮಾಡಿಕೊಂಡು ನಿಂತಾಗ ನಮ್ಮ ಎಡಕ್ಕೆ ಕಡಿಮೆ ಒತ್ತಡದ ಪ್ರದೇಶಗಳು ಹಾಗೂ ನಮ್ಮ ಬಲಕ್ಕೆ ಅಧಿಕ ಒತ್ತಡ ಪ್ರದೇಶಗಳಿರುತ್ತವೆ. ಹಾಗೆಯೇ ದಕ್ಷಿಣಾರ್ಧ ಗೋಳದಲ್ಲಿ ಬೀಸುವ ಗಾಳಿಗೆ ಬೆನ್ನು ಮಾಡಿಕೊಂಡು ನಿಂತಾಗ ನಮ್ಮ ಎಡಕ್ಕೆ ಹೆಚ್ಚು ಒತ್ತಡದ ಪ್ರದೇಶಗಳು ಹಾಗೂ ನಮ್ಮ ಬಲಕ್ಕೆ ಕಡಿಮೆ ಒತ್ತಡ ಪ್ರದೇಶಗಳಿರುತ್ತವೆ. ಇದನ್ನೇ ಬುಯ್ಸ್ ಬ್ಯಾಲಟ್ ನಿಯಮ ಎನ್ನುವರು.

ಫೆರೆಲ್ ನಿಯಮ

ಈ ನಿಯಮದ ಪ್ರಕಾರ ನಾವು ಕಡಿಮೆ ಒತ್ತಡ ಪ್ರದೇಶದ ಕಡೆಗೆ ಮುಖ ಹಾಗೂ ಹೆಚ್ಚು ಒತ್ತಡ ಪ್ರದೇಶದ ಕಡೆಗೆ ಬೆನ್ನು ಮಾಡಿ ನಿಂತಾಗ ಗಾಳಿಯು ಉತ್ತರಾರ್ಧ ಗೋಳದಲ್ಲಿ ನಮ್ಮ ಬಲಗಡೆಗೆ ಹಾಗೂ ದಕ್ಷಿಣಾರ್ಧ ಗೋಳದಲ್ಲಿ ನಮ್ಮ ಎಡಗಡೆಗೆ ಬೀಸುತ್ತಿರುತ್ತವೆ. ವಿಚಲನೆಯು ಸಮಭಾಜಕ ವೃತ್ತದಲ್ಲಿ ಕಡಿಮೆ ಹಾಗೂ ಧ್ರುವ ಪ್ರದೇಶಗಳಲ್ಲಿ ಹೆಚ್ಚಾಗಿರುತ್ತದೆ.


ಮಾರುತಗಳು

1. ನಿರಂತರ ಮಾರುತಗಳು

ಅ. ವ್ಯಾಪಾರಿ ಗಾಳಿಗಳು/ವಾಣಿಜ್ಯ ಮಾರುತಗಳು

ಮೇಲೆ ಕರ್ಕಾಟಕ ಸಂಕ್ರಾಂತಿ ವೃತ್ತದಿಂದ ಮತ್ತು ಕೆಳಗೆ ಮಕರ ಸಂಕ್ರಾಂತಿ ವೃತ್ತದಿಂದ ಸಮಭಾಜಕ ವೃತ್ತದ ಕಡೆಗೆ ಪೂರ್ವದಿಂದ ಪಶ್ಚಿಮದ ಕಡೆಗೆ ಬೀಸುವ ಮಾರುತಗಳಾಗಿವೆ. ಹಾಗಾಗಿ ಇವುಗಳನ್ನು ಪೂರ್ವದ ಗಾಳಿಗಳು/ಈಸ್ಟರಲೀಸ್ ಎನ್ನುವರು

ಈ ಗಾಳಿಗಳು ಉತ್ತರಾರ್ಧ ಗೋಳದಲ್ಲಿ ಈಶಾನ್ಯದಿಂದ ನೈರುತ್ಯದ ಕಡೆಗೆ ಬೀಸಿದರೆದಕ್ಷಿಣಾರ್ಧ ಗೋಳದಲ್ಲಿ ಆಗ್ನೇಯದಿಂದ ವಾಯುವ್ಯದ ಕಡೆಗೆ ಬೀಸುತ್ತವೆ.

ಆ. ಪ್ರತಿ ವ್ಯಾಪಾರಿ ಗಾಳಿಗಳು/ ಪ್ರತಿ ವಾಣಿಜ್ಯ ಮಾರುತಗಳು

ಈ ಮಾರುತಗಳು ಉತ್ತರ ಮತ್ತು ದಕ್ಷಿಣ ಗೋಳಾರ್ಧದಲ್ಲಿ 23.5 ಡಿಗ್ರಿ ಅಕ್ಷಾಂಶದಿಂದ 66.5 ಡಿಗ್ರಿ ಅಕ್ಷಾಂಶದ ಮಧ್ಯೆ ಪಶ್ಚಿಮದಿಂದ ಪೂರ್ವದ ಕಡೆಗೆ ಬೀಸುತ್ತವೆ. ಹಾಗಾಗಿ ಇವುಗಳನ್ನು ವೆಸ್ಟರ್‍ಲೀಸ್/ಪಶ್ಚಿಮದ ಗಾಳಿಗಳು ಎನ್ನುವರು. ಬೋರಿಯಲ್ ಎಂಬುದು ಇವುಗಳಿಗಿರುವ ಮತ್ತೊಂದು ಹೆಸರು.

ಈ ಗಾಳಿಗಳು ಉತ್ತರಾರ್ಧ ಗೋಳದಲ್ಲಿ ನೈರುತ್ಯದಿಂದ ಈಶಾನ್ಯದ ಕಡೆಗೆ ಬೀಸಿದರೆ, ದಕ್ಷಿಣಾರ್ಧ ಗೋಳದಲ್ಲಿ ವಾಯುವ್ಯದಿಂದ ಆಗ್ನೇಯದ ಕಡೆಗೆ ಬೀಸುತ್ತವೆ. ಈ ಮಾರುತಗಳು ಉತ್ತರಾರ್ಧ ಗೋಳಕ್ಕಿಂತ ದಕ್ಷಿಣಾರ್ಧ ಗೋಳದಲ್ಲಿ ಹೆಚ್ಚು ಕ್ರಿಯಾಶೀಲವಾಗಿರುತ್ತವೆ ಕಾರಣ ದಕ್ಷಿಣಾರ್ಧ ಗೋಳವು ಜಲ ಪ್ರಧಾನ ಭಾಗವಾಗಿದೆ.

ಪ್ರತಿ ವ್ಯಾಪಾರಿ ಗಾಳಿಗಳು/ಪ್ರತಿ ವಾಣಿಜ್ಯ ಮಾರುತಗಳನ್ನು 40 ರ ಅಬ್ಬರ ಗಾಳಿ, 50 ರ ಉಗ್ರಗಾಳಿ ಮತ್ತು 60 ರ ಅರಚುವ ಗಾಳಿಗಳೆಂದು ಕರೆಯುವರು.

ಇ. ಶೀತ ಗಾಳಿಗಳು/ಧ್ರುವೀಯ ಮಾರುತಗಳು

ಈ ಮಾರುತಗಳು ಸಹ ಪೂರ್ವದಿಂದ ಪಶ್ಚಿಮ ಕಡೆಗೆ ಬೀಸುವುದರಿಂದ ಇವುಗಳನ್ನು ಸಹ ಪೂರ್ವದ ಗಾಳಿಗಳೆನ್ನುವರು. ಈ ಗಾಳಿಗಳು ಉತ್ತರಾರ್ಧ ಗೋಳದಲ್ಲಿ ಈಶಾನ್ಯದಿಂದ ನೈರುತ್ಯದ ಕಡೆಗೆ ಬೀಸಿದರೆದಕ್ಷಿಣಾರ್ಧ ಗೋಳದಲ್ಲಿ ಆಗ್ನೇಯದಿಂದ ವಾಯುವ್ಯದ ಕಡೆಗೆ ಬೀಸುತ್ತವೆ.

2. ಮಾನ್ಸೂನ್ ಮಾರುತಗಳು

ಮಾನ್ಸೂನ್ ಎಂಬ ಪದವು ಅರೇಬಿಕ್ ಭಾಷೆಯ ಮೌಸಮ್ ಎಂಬ ಪದದಿಂದ ಬಂದಿದೆ. ಮೌಸಮ್ ಎಂದರೆ ನಿಯತಕಾಲಿಕ ಎಂದರ್ಥ. ಈ ಮಾರುತಗಳು ಒಂದು ನಿರ್ದಿಷ್ಟ ಅವಧಿಯಲ್ಲಿ ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಬೀಸುತ್ತವೆ.

ದಕ್ಷಿಣ ಮತ್ತು ಪೂರ್ವ ಏಷ್ಯಾದ ರಾಷ್ಟ್ರಗಳುಆಫ್ರಿಕಾ ಖಂಡದ ಪೂರ್ವ ಮತ್ತು ಪಶ್ಚಿಮ ಭಾಗಗಳುದಕ್ಷಿಣ ಅಮೇರಿಕಾದ ಉತ್ತರ ಭಾಗದ ಪ್ರದೇಶಗಳು ಈ ಮಾನ್ಸೂನ್ ಮಾರುತಗಳ ಪ್ರಭಾವಕ್ಕೆ ಒಳಪಟ್ಟಿವೆ.

ಇವುಗಳಲ್ಲಿ ಚಳಿಗಾಲದ ಒಣ ಮಾರುತಗಳು ಮತ್ತು ಬೇಸಿಗೆಯ ತೇವಾಂಶಭರಿತ ಮಾರುತಗಳು ಎಂಬ ಎರಡು ವಿಧಗಳಿವೆ.

3. ಆವರ್ತ ಮಾರುತಗಳು

ಸುತ್ತಲಿನ ಹೆಚ್ಚು ಒತ್ತಡ ಪ್ರದೇಶದಿಂದ ಕೇಂದ್ರದ ಕಡಿಮೆ ಒತ್ತಡ ಪ್ರದೇಶದ ಕಡೆ ಮಾರುತಗಳು ಸುರುಳಿಯಾಕಾರದಲ್ಲಿ ಬೀಸುವುದನ್ನು ಆವರ್ತ ಮಾರುತಗಳೆನ್ನುವರು.

ಆವರ್ತ ಮಾರುತಗಳು ಉತ್ತರ ಗೋಳಾರ್ಧದಲ್ಲಿ ಅಪ್ರದಕ್ಷಿಣಾಕಾರವಾಗಿ (ಗಡಿಯಾರದ ಮುಳ್ಳು ಚಲಿಸುವ ದಿಕ್ಕಿನಲ್ಲಿ) ಚಲಿಸುತ್ತವೆ. ದಕ್ಷಿಣ ಗೋಳಾರ್ಧದಲ್ಲಿ ಪ್ರದಕ್ಷಿಣಾಕಾರವಾಗಿ (ಗಡಿಯಾರದ ಮುಳ್ಳು ಚಲಿಸುವ ವಿರುದ್ಧ ದಿಕ್ಕಿನಲ್ಲಿ) ಚಲಿಸುತ್ತವೆ.

ವಿವಿಧ ದೇಶಗಳಲ್ಲಿ ಆವರ್ತ ಮಾರುತಗಳಿಗಿರುವ ಹೆಸರು

ವಿಲ್ಲಿ ವಿಲ್ಲಿ  ಆಸ್ಟ್ರೆಲಿಯಾ

ಹರ್ರಿಕೇನ್  ಅಮೇರಿಕಾ ಮತ್ತು ವೆಸ್ಟ್ ಇಂಡೀಸ್

ತುಫಾನ್  ಜಪಾನ್ ಮತ್ತು ಚೀನಾ

ಬಗೋಯಿನ್ಸ್ - ಪಿಲಿಪೈನ್ಸ್

ಸೈಕ್ಲೋನ್ - ಭಾರತ

4. ಪ್ರತ್ಯಾವರ್ತ ಮಾರುತಗಳು

ಕೇಂದ್ರಭಾಗದ ಹೆಚ್ಚು ಒತ್ತಡ ಪ್ರದೇಶದಿಂದ ಸುತ್ತಲಿನ ಕಡಿಮೆ ಒತ್ತಡ ಪ್ರದೇಶದ ಕಡೆಗೆ ಬೀಸುವ ಮಾರುತಗಳನ್ನು ಪ್ರತ್ಯಾವರ್ತ ಮಾರುತಗಳು ಎನ್ನುವರು.

ಪ್ರತ್ಯಾವರ್ತ ಮಾರುತಗಳು ಉತ್ತರ ಗೋಳಾರ್ಧದಲ್ಲಿ ಪ್ರದಕ್ಷಿಣಾಕಾರವಾಗಿ (ಗಡಿಯಾರದ ಮುಳ್ಳು ಚಲಿಸುವ ವಿರುದ್ಧ ದಿಕ್ಕಿನಲ್ಲಿ) ಚಲಿಸುತ್ತವೆ. ದಕ್ಷಿಣ ಗೋಳಾರ್ಧದಲ್ಲಿ ಅಪ್ರದಕ್ಷಿಣಾಕಾರವಾಗಿ (ಗಡಿಯಾರದ ಮುಳ್ಳು ಚಲಿಸುವ ದಿಕ್ಕಿನಲ್ಲಿ) ಚಲಿಸುತ್ತವೆ.

5. ಸ್ಥಳೀಯ ಮಾರುತಗಳು

ಪರ್ವತ ಗಾಳಿಗಳುಕಣಿವೆ ಗಾಳಿಗಳುಸಮುದ್ರದ ಮಂದ ಮಾರುತಗಳು ಮತ್ತು ಭೂಮಂದ ಮಾರತಗಳು ಇವು ಸ್ಥಳೀಯ ಮಾರುತಗಳಾಗಿವೆ.

1. ಎಲ್‍ನಿನೋ ಪ್ರವಾಹಗಳು

ಎಲ್ ನಿನೋ ಎಂದರೆ ಚಿಕ್ಕಹುಡುಗ ಎಂದರ್ಥ. ಪೆಸಿಫಿಕ್ ಸಾಗರದ ಪಶ್ಚಿಮದ ಉಷ್ಣದ ನೀರು ಪೂರ್ವದ ಕಡೆ ಹರಿದು ಬರುತ್ತದೆ ಈ ಪ್ರವಾಹವನ್ನೇ ಎಲ್‍ನಿನೋ ಎನ್ನುವರು. ಇವು 3 ರಿಂದ 7 ವರ್ಷಗಳಿಗೊಮ್ಮೆ ಫೆಸಿಫಿಕ್ ಸಾಗರದಲ್ಲಿ ಕಂಡುಬರುತ್ತವೆ. ಈ ಪ್ರವಾಹಗಳಿಂದ ಇಂಡೋನೇಷ್ಯಾ, ಆಸ್ಟ್ರೇಲಿಯಾ ಮತ್ತು ಪಶ್ಚಿಮ ಫೆಸಿಫಿಕ್‍ನಲ್ಲಿ ಬರಗಾಲ ಉಂಟಾಗುವುದು. ಪೂರ್ವ ಫೆಸಿಫಿಕ್ ತಿರದಲ್ಲಿ ಅಭಿವೃದ್ಧಿಯುಂಟಾಗುತ್ತದೆ.

2. ಲಾನಿನಾ ಪ್ರವಾಹಗಳು

ಲಾನಿನಾ ಎಂದರೆ ಚಿಕ್ಕಹುಡುಗಿ ಎಂದರ್ಥ. ಫೆಸಿಫಿಕ್ ಸಾಗರದ ಪೂರ್ವದ ಕಡೆಗೆ ಹರಿಯುವ ಶೀತ ನೀರಿನ ಪ್ರವಾಹವನ್ನು ಲಾನಿನಾ ಎನ್ನುವರು. ಈ ಪ್ರವಾಹಗಳಿಂದ ಇಂಡೋನೇಷ್ಯಾ ಆಸ್ಟ್ರೇಲಿಯಾ ಮತ್ತು ಪಶ್ಚಿಮ ಫೆಸಿಫಿಕ್‍ನಲ್ಲಿ ಅಭಿವೃದ್ಧಿ ಉಂಟಾಗುವುದು. ಪೂರ್ವ ಫೆಸಿಫಿಕ್ ತೀರದಲ್ಲಿ ಬರಗಾಲವುಂಟಾಗುತ್ತದೆ.

ಪರ್ವತಗಳ ಕಣಿವೆಯ ಮಧ್ಯ ಬೀಸುವ ಗಾಳಿಯನ್ನು ಅನಾಬ್ಯಾಟಿಕ್ ಎಂತಲೂ, ಪರ್ವತಗಳಲ್ಲಿ ಬೀಸುವ ಗಾಳಿಗಳಿಗೆ ಕಾಟಾಬ್ಯಾಟಿಕ್ ಎಂತಲೂ ಕರೆಯುವರು.

ಮೋಡಗಳು ಪರ್ವತ ಸಾಲುಗಳಿಗೆ ತಗುಲಿ ಆ ಪರ್ವತಗಳ ಇಳಿಜಾರಿನಲ್ಲಿ ಉಂಟಾಗುವ ಮಳೆಯನ್ನು ಆರೋಹ ಮಳೆ/ಪರ್ವತ ಜನಿತ ಮಳೆ ಎನ್ನುವರು.

ಸ್ಥಳೀಯ ಗಾಳಿಗಳಿಗೆ ಇತರ ದೇಶಗಳಲ್ಲಿ ಕರೆಯುವ ಹೆಸರು

ಟೋರ್ನಾಡೊ  ಅಮೇರಿಕಾ

ಬರ್ಗ್  ಡ್ರಾಗನ್ಸ್ ಬರ್ಗ್ ಪರ್ವತ ಶ್ರೇಣಿ (ಆಫ್ರಿಕ)

ಮಿಸ್ಟ್ರಲ್ಸ್  ಆಲ್ಫ್ಸ್ ಪರ್ವತ ಶ್ರೇಣಿಗಳು (ಯುರೋಪ್)

ಸಿರೋಕೊ - ಸಹಾರಾ ಮರುಭೂಮಿ (ಆಫ್ರಿಕ)

ಚಿನೂಕ್  ರಾಖಿ ಪರ್ವತ ಶ್ರೇಣಿಗಳು (ಉತ್ತರ ಅಮೇರಿಕ)

ಜೊಂಡಾ  ಆ್ಯಂಡಿಸ್ ಪರ್ವತ ಶ್ರೇಣಿ (ಅಮೇರಿಕ)

ಹರ್ಮಟ್ಟನ್ ಸಹರಾ ಮರುಭೂಮಿ (ಆಫ್ರಿಕ)

ಪಾಪಾಗವೋ  ಮೆಕ್ಸಿಕೋ (ಉತ್ತರ ಅಮೇರಿಕ)

ಪುರ್ಗಾ - ಸೈಬೀರಿಯಾ (ಏಷ್ಯಾ)

ಬ್ಲಿಝರ್ಡ್  ಯು.ಎಸ್.ಎ ಮತ್ತು ಕೆನಡಾ (ಉತ್ತರ ಅಮೇರಿಕ)

ಲೂ/ಆಂಧೀಸ್/ಕಾಲ್ ಬೈಸಾಕಿ - ಭಾರತ

ಕಾಮೆಂಟ್‌ಗಳು