ಭಾರತದ ನದಿಗಳು
ಭಾರತದ ನದಿಗಳು
ಉತ್ತರ ಭಾರತದ ನದಿಗಳು
ಉತ್ತರ ಭಾರತದ ನದಿಗಳು ವರ್ಷವಿಡೀ ಹರಿಯುವುದರಿಂದ ಇವುಗಳನ್ನು ಜೀವನದಿಗಳೆಂದು ಕರೆಯುವರು.
1. ಸಿಂಧೂನದಿ
ಟಿಬೆಟ್ ನ ಕೈಲಾಸ ಪರ್ವತದ ಮಾನಸ ಸರೋವರದ ಬಳಿ ಉಗಮವಾಗಿ ಪಾಕಿಸ್ತಾನದ ಕರಾಚಿ ಬಳಿ ಅರಬ್ಬಿ ಸಮುದ್ರ ಸೇರುವುದು. ಈ ನದಿಯ ಒಟ್ಟು ಉದ್ದ 3180 ಕಿಮೀ ಮತ್ತು ಭಾರತದಲ್ಲಿ 709 ಕಿ.ಮೀ ಉದ್ದ ಹರಿಯುತ್ತದೆ. ಇದರ ಒಟ್ಟು ಜಲಾನಯನ ಪ್ರದೇಶ 1.17.844 ಕಿ.ಮೀ
ಸಿಂಧು ನದಿಯನ್ನು ನದಿಗಳ ತಂದೆ ಎಂದು ಕರೆಯುವರು. ಸಿಂಧೂ ಮತ್ತು ಅದರ 5 ಉಪನದಿಗಳು ಪಂಜಾಬ್‍ನಲ್ಲಿ ಹರಿಯುವುದರಿಂದ ಪಂಜಾಬನ್ನು ಪಂಚನದಿಗಳ ನಾಡು ಎಂದು ಕರೆಯುವರು
ಸಿಂಧೂನದಿಯ ಪ್ರಮುಖ ಉಪನದಿಗಳು
ರಾವಿ : ಹಿಮಾಚಲ ಪ್ರದೇಶದ ಕುಲು ಬೆಟ್ಟಗಳಲ್ಲಿ ಈ ನದಿ ಉಗಮವಾಗುತ್ತದೆ. ಭಾರತದಲ್ಲಿ 720 ಕಿ.ಮೀ ದೂರ ಹರಿದು ಪಾಕಿಸ್ತಾನದಲ್ಲಿ ಚೀನಾಬ್ ನದಿಯನ್ನು ಸೇರುತ್ತದೆ.
ಚೀನಾಬ್ : ಈ ನದಿಯು ಚಂದ್ರ ಮತ್ತು ಭಾಗ ಎಂಬ 2 ನದಿಮೂಲಗಳನ್ನು ಒಳಗೊಂಡಿದ್ದು ಹಿಮಾಚಲ ಪ್ರದೇಶದ ಲಾಹುಲ್ ಸ್ಪಿತಿ ಕಣಿವೆಯಲ್ಲಿ ಉಗವiವಾಗುತ್ತದೆ. 960 ಕಿ.ಮೀ ದೂರ ಹರಿದು ಪಾಕಿಸ್ತಾನದ ರಂಗಪುರ್ ಎಂಬಲ್ಲಿ ಸಟ್ಲೇಜ್ ನದಿಯನ್ನು ಸೇರುತ್ತದೆ.
ಸಟ್ಲೇಜ್ : ಸಿಂಧೂನದಿಯ ಉಪನದಿಗಳಲ್ಲಿ ಅತ್ಯಂತ ಪ್ರಮುಖವಾದುದು. ಕೈಲಾಸ ಪರ್ವತದ ರಾಕಾಸ್ ಸರೋವರದಲ್ಲಿ ಉಗಮವಾಗುತ್ತದೆ. 1500 ಕಿ.ಮಿ ಉದ್ದವಿರುವ ಈ ನದಿಗೆ ಹಿಮಾಚಲ ಪ್ರದೇಶದಲ್ಲಿ ಭಾಕ್ರಾನಂಗಲ್ ಅಣೆಕಟ್ಟನ್ನು ಕಟ್ಟಲಾಗಿದೆ. ಇದು ಭಾರತದ ಗಡಿಯಾಚೆ ಉಗಮವಾಗುವ ಸಿಂಧೂನದಿಯ ಏಕೈಕ ಉಪನದಿಯಾಗಿದೆ.
ಈ ನದಿಯು ಪಂಜಾಬ್ ನಲ್ಲಿ ನೇನಾದೇವಿ ಧಾರ್ ಎಂಬ ಜಲಪಾತವನ್ನು ಸೃಷ್ಟಿಸಿದೆ.
ಝೀಲಮ್ : ಜಮ್ಮು ಕಾಶ್ಮೀರದ ಪೀರ್ ಪಂಜಾಲ್ ಶ್ರೇಣಿಯ ಶೇಷ್‍ನಾಗ್ ಎಂಬಲ್ಲಿ ಉಗಮವಾಗುತ್ತದೆ. ಭಾರತದ ಅತಿದೊಡ್ಡ ಸಿಹಿನೀರಿನ ಸರೋವರವಾದ ಉಲಾರ್ ಸರೋವರದ ಮೂಲಕ 725 ಕಿ.ಮೀ ಹರಿದು ಪಾಕಿಸ್ತಾನದಲ್ಲಿ ಚೀನಾಬ್ ನದಿಯನ್ನು ಸೇರುತ್ತದೆ. ಭಾರತದಲ್ಲಿ ಈ ನದಿಯ ಉದ್ದ 400 ಕಿ.ಮೀ.
ಕಿಶನ್ ಗಂಗಾ ಈ ನದಿಯ ಪ್ರಮುಖ ಉಪನದಿಯಾಗಿದೆ.
ಬಿಯಾಸ್ : ಹಿಮಾಚಲ ಪ್ರದೇಶದ ರೋಹ್ಟಾಂಗ ಕಣಿವೆಯ ಬಿಯಾಸ್ ಕುಂಡ ಎಂಬಲ್ಲಿ ಉಗಮವಾಗಿ 470 ಕಿ.ಮೀ ಹರಿದು ಪಂಜಾಬ್ ನಲ್ಲಿ ಸಟ್ಲೇಜ್ ನದಿಯನ್ನು ಸೇರುತ್ತದೆ.
ಗಂಗಾನದಿ
ಗಂಗಾನದಿ ಭಾರತದ ರಾಷ್ಟ್ರೀಯ ನದಿ ಎನಿಸಿದೆ. ಗಂಗೋತ್ರಿಯ ಗೋಮುಖ ಎಂಬಲ್ಲಿ ಉಗಮವಾಗುವ ಭಾಗೀರಥಿ ಮತ್ತು ಅಲಕನಂದಾ ನದಿಗಳು ಉತ್ತರಾಖಂಡದ ದೇವಪ್ರಯಾಗ ಎಂಬಲ್ಲಿ ಸೇರಿ ಗಂಗಾನದಿಯಾಗಿದೆ. 2525 ಕಿ.ಮಿ ಉದ್ದ ಇರುವ ಗಂಗಾನದಿ ಭಾರತದ ಅತಿ ಉದ್ದವಾದ ನದಿ ಎನಿಸಿದೆ. ಗಂಗಾನದಿಯ ಒಟ್ಟು ಜಲಾನಯನ ಪ್ರದೇಶ 10,80,000 ಚ.ಕಿ.ಮೀ.
ಗಂಗಾನದಿಯು ಮುಂದೆ ಪ.ಬಂಗಾಳದ ಪರಕ್ಕಾ ಎಂಬಲ್ಲಿ ಹೂಗ್ಲಿ-ಭಾಗೀರಥೀ ಮತ್ತು ಪದ್ಮಾ ಎಂದು 2 ಭಾಗವಾಗಿ ಹರಿಯುತ್ತದೆ. ಹೂಗ್ಲಿ-ಭಾಗೀರಥೀ ನದಿಗೆ ಪರಕ್ಕಾ ಅಣೆಕಟ್ಟನ್ನು ಕಟ್ಟಲಾಗಿದೆ. ಕಲ್ಕತ್ತಾ ನಗರ ಸ್ಥಾಪಿತವಾಗಿರುವುದು ಸಹ ಇದೇ ಹೂಗ್ಲಿ ನದಿಯ ದಂಡೆಯ ಮೇಲೆ. ಹೂಗ್ಲಿ ನದಿಯು ಭಾರತದಲ್ಲಿಯೇ ಅತಿ ಹೆಚ್ಚು ಆಂತರಿಕ ಜಲಮಾರ್ಗವನ್ನು ಹೊಂದಿರುವ ನದಿಯಾಗಿದೆ.
ಪದ್ಮಾ ನದಿಯು ಬಾಂಗ್ಲಾದೇಶವನ್ನು ಪ್ರವೇಶಿಸಿದ ನಂತರ ಬ್ರಹ್ಮಪುತ್ರಾ ನದಿಯೊಂದಿಗೆ ಸೇರಿ ಮೇಘನಾ ನದಿಯಾಗಿ ಹರಿದು ಬಂಗಾಳಕೊಲ್ಲಿ ಸೇರುತ್ತದೆ.
ಗಂಗಾ ನದಿಯ ಪ್ರಮುಖ ಉಪನದಿಗಳು
ಯಮುನಾ : ಉತ್ತರಾಖಂಡದ ಯಮುನೋತ್ರಿ ಎಂಬಲ್ಲಿ ಈ ನದಿ ಉಗಮವಾಗುತ್ತದೆ. ಈ ನದಿಯು ಪ್ರಯಾಗ್‍ರಾಜ್ ಎಂಬಲ್ಲಿ ಗಂಗಾನದಿಯನ್ನು ಸೇರುತ್ತದೆ. ಈ ಎರಡು ನದಿಗಳ ಜಲಾನಯನ ಪ್ರದೇಶವನ್ನು ದೋ-ಅಬ್ ಪ್ರದೇಶ ಎಂದು ಕರೆಯುತ್ತಿದ್ದರು. ಗಂಗಾ ಮತ್ತು ಯಮುನಾ ನದಿ ಬಯಲು ಪ್ರದೇಶವನ್ನು ಯಾಝೂ ಎಂದು ಸಹ ಕರೆಯುವರು.
ದೆಹಲಿ, ಆಗ್ರಾ ಮತ್ತು ಮಥುರಾ ಈ ನದಿ ದಂಡೆಯ ಮೇಲಿನ ಪ್ರಮುಖ ನಗರಗಳಾಗಿವೆ.
ಚಂಬಲ್ ಮತ್ತು ಬೇಟ್ವಾ ಯಮುನಾ ನದಿಯ ಪ್ರಮುಖ ಉಪನದಿಗಳು
ಕೋಸಿ : ಇದನ್ನು ಬಿಹಾರದ ಕಣ್ಣೀರಿನ ನದಿ ಎನ್ನುವರು. ಈ ನದಿಯು ನೇಪಾಳದ ಶೀಷ್ ಪಂಗ್ಮಾ ಎಂಬಲ್ಲಿ ಉಗಮವಾಗಿ ಭಾಗಲ್ಪುರದ ಬಳಿ ಗಂಗಾನದಿಯನ್ನು ಸಂಧಿಸುತ್ತದೆ.
ದಾಮೋದರ್ : ಝಾರ್ಖಂಡ್ ನ ಛೋಟಾನಾಗ್ಪುರ ಪ್ರಸ್ಥಭೂಮಿಯ ಥೋರಿ ಎಂಬಲ್ಲಿ ಉಗಮವಾಗುತ್ತದೆ. ಇದನ್ನು ಬಂಗಾಳದ ಕಣ್ಣೀರಿನ ನದಿ ಎನ್ನುವರು. ಈ ನದಿಯು ಕಲ್ಕತ್ತಾದ ಬಳಿ ಹೂಗ್ಲಿ ನದಿಯನ್ನು ಸೇರುವುದು. ದಾಮೋದರ್ ನದಿ ಮುಖಜ ಭೂಮಿಯನ್ನು ಭಾರತದ ರೂರ್ ಎನ್ನುವರು.
ರಾಮ್‍ಗಂಗಾ, ಮಹಾಕಾಳಿ, ಘಂಡಕ್, ಘಾಗ್ರಾ, ಸೋನಾ, ಮಹಾನಂದ, ಬನಾಸ್, ಸಿಂಧ್, ಕೇನ್ ಇವು ಗಂಗಾ ನದಿಯ ಇತರ ಪ್ರಮುಖ ಉಪನದಿಗಳಾಗಿವೆ.
ನಮಾಮಿ ಗಂಗಾ ಎಂಬುದು ಗಂಗಾನದಿ ಶುದ್ಧೀಕರಣ ಯೋಜನೆಯಾಗಿದೆ.
ಬ್ರಹ್ಮಪುತ್ರಾ
ಟಿಬೆಟ್ ನಲ್ಲಿ ಉಗಮವಾಗುವ ಈ ನದಿಯ ಒಟ್ಟು ಉದ್ದ 3848 ಕಿ.ಮೀ ಆದರೆ ಭಾರತದಲ್ಲಿ ಕೇವಲ 885 ಕಿ.ಮೀ ಉದ್ದ ಹರಿಯುತ್ತದೆ. ಇದನ್ನು ಅಸ್ಸಾಮಿನ ಕಣ್ಣೀರಿನ ನದಿ ಎಂದು ಕರೆಯುವರು.
ಗಂಗಾ ಮತ್ತು ಬ್ರಹ್ಮಪುತ್ರ ನದಿಗಳು ಸೇರಿ ಪ್ರಪಂಚದ ಅತಿದೊಡ್ಡ ನದಿ ಮುಖಜ ಭೂಮಿಯನ್ನು ಸೃಷ್ಟಿಸಿವೆ. ಆ ನದಿ ಮುಖಜ ಭೂಮಿಯ ವಿಸ್ತಾರ 51.306 ಚ.ಕಿ.ಮೀ. ಈ ನದಿ ಮುಖಜ ಭೂಮಿಯಲ್ಲಿ ಸುಂದರ್ ಬನ್ ಅರಣ್ಯಗಳನ್ನು ಕಾಣುತ್ತೇವೆ.
ಬ್ರಹ್ಮಪುತ್ರಾ ನದಿಯು ಅಸ್ಸಾಂನಲ್ಲಿ ನದೀದ್ವೀಪವೊಂದನ್ನು ರಚಿಸಿದ್ದು ಇದನ್ನು ಮಜೂಲಿ ದ್ವೀಪ ಎನ್ನುವರು. ಇದು ಭಾರತದ ಏಕೈಕ ದ್ವೀಪ ಜಿಲ್ಲೆಯಾಗಿದೆ.
ಬ್ರಹ್ಮಪುತ್ರ ನದಿಯ ಉಪನದಿಗಳು
ಸುಬನ್ ಗಿರಿ, ಧನಸಿರಿ, ಕಾಮೆಂಗ್, ಮಾನಸ್, ಲೂಹಿತ್, ದಿಹಾಂಗ್, ಜೈಬೋರ್ಲಿ, ತೀಸ್ತಾ, ನೋವಾದಿಹಿಂಗ್, ವಿಸ್ಸಾಂಗ್, ದಿಬು, ಬೂಹ್ಹಿ, ಕಪೋಲಿ ಮುಂತಾದವು
ದಕ್ಷಿಣ ಭಾರತದ ನದಿಗಳು
ಪೂರ್ವಕ್ಕೆ ಹರಿಯುವ ನದಿಗಳು
ಮಹಾನದಿ
ಈ ನದಿಯು ಛತ್ತೀಸ್‍ಘರ್ ನ ಸಿವಾಹ್ ಶ್ರೇಣಿಯಲ್ಲಿ ಉಗಮವಾಗುತ್ತದೆ. ನದಿಯ ಒಟ್ಟು ಉದ್ದ 858 ಕಿ.ಮೀ ಇದ್ದು 1.4 ಲಕ್ಷ ಜಲಾನಯನ ಪ್ರದೇಶವನ್ನು ಒಳಗೊಂಡಿದೆ. ಈ ನದಿಯು ಒಡಿಶಾದ ಕಟಕ್ ಬಳಿ ಬಂಗಾಳಕೊಲ್ಲಿಯನ್ನು ಸೇರುತ್ತದೆ. ಪುರಿಯ ಜಗನ್ನಾಥ ದೇವಾಲಯ ಈ ನದಿ ತಟದಲ್ಲಿದೆ.
ಒಡಿಶಾದ ಚಿಲ್ಕಾ ಸರೋವರವು ಮಹಾನದಿಯಿಂದ ರೂಪುಗೊಂಡಿದೆ. ಮಹಾನದಿಗೆ ಒಡಿಶಾದಲ್ಲಿ ಹಾಸ್ದಿಯೊ ಬಾಂಗೊ, ಮಹಾನದಿ ರಿಸರ್ವಾಯಿರ್ ಮತ್ತು ಹಿರಾಕುಡ್ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಹಾಗೆಯೇ ಛತ್ತೀಸ್‍ಘರ್‍ನಲ್ಲಿ ಮಹಾನದಿ ಮುಖ್ಯ ಕಾಲುವೆ ಹಾಗೂ ಥಂಡೂ ರಿಸರ್ವಾಯಿರ್ ಗಳನ್ನು ನಿರ್ಮಿಸಲಾಗಿದೆ
ಶಿಯೋನಾಥ, ಹಾಸ್ಸೋ, ಟೆಲ್, ಇಬ್, ಮಂಡ್ ಮುಂತಾದವು ಈ ನದಿಯ ಉಪನದಿಗಳಾಗಿವೆ.
ಕೃಷ್ಣಾ ನದಿ
ಕೃಷ್ಣಾ ನದಿ ಮಹಾರಾಷ್ಟ್ರ, ಕರ್ನಾಟಕ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಪ್ರವಹಿಸುತ್ತದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳ ಮಹಾದೇವ ಪರ್ವತ ಶ್ರೇಣಿಯಲ್ಲಿ ಮಹಾಬಲೇಶ್ವರದ ಹತ್ತಿರ ಉಗಮವಾಗಿ ಸುಮಾರು 1392 ಕಿ.ಮಿ.ಗಳಷ್ಟು ಹರಿಯುವ ಈ ನದಿ ಕರ್ನಾಟಕ ರಾಜ್ಯದಲ್ಲಿ ಸುಮಾರು 483 ಕಿ.ಮಿ.ಹರಿಯುತ್ತದೆ. ಮುಂದೆ ಆಂಧ್ರಪ್ರದೇಶದ ಹಂಸಲಾದೀವಿಯಲ್ಲಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಕೃಷ್ಣಾ ನದಿ ದಕ್ಷಿಣ ಭಾರತದ ಎರಡನೆಯ ದೊಡ್ಡ ನದಿಯಾಗಿದೆ.
ಮುಖ್ಯವಾದ ಉಪನದಿಗಳು
ತುಂಗಭದ್ರಾ , ಕೊಯ್ನಾ, ಭೀಮಾ , ಮಲಪ್ರಭಾ ಮತ್ತು ಘಟಪ್ರಭಾ, ಧೋಣಿ, ದಿಂದಿ, ಮೂಸಿ, ಪಲೇರ್, ಅಕೇರು, ವೀರ, ವರ್ಣ ಮುಂತಾದವು
ಕೃಷ್ಣಾನದಿಗೆ ವಿಜಯಪುರದ ಬಳಿ ಆಲಮಟ್ಟಿ ಅಣೆಕಟ್ಟು ನಿರ್ಮಿಸಲಾಗಿದೆ, ಇದರ ಮತ್ತೊಂದು ಹೆಸರು ಲಾಲ್ ಬಹಾದ್ದೂರ್ ಶಾಸ್ತ್ರಿ ಅಣೆಕಟ್ಟು. ಹಾಗೆಯೇ ಯಾದಗಿರಿಯ ನಾರಾಯಣಪುರದ ಬಳಿ ಸಹ ಕೃಷ್ಣಾನದಿಗೆ ನಾರಾಯಣಪುರ ಅಣೆಕಟ್ಟನ್ನು ನಿರ್ಮಿಸಲಾಗಿದ್ದು. ಅದರ ಮತ್ತೊಂದು ಹೆಸರು ಬಸವಸಾಗರ.
ಬಾಗಲಕೋಟೆಯ ಕೂಡಲಸಂಗಮದಲ್ಲಿ ಮಲಪ್ರಭಾ, ಘಟಪ್ರಭಾ ಮತ್ತು ಭೀಮಾ ನದಿಗಳು ಸಂಗಮ ಹೊಂದುತ್ತವೆ.
ಕೃಷ್ಣಾ ನದಿಯ ಪ್ರಮುಖ ಉಪನದಿಗಳು ಮತ್ತು ಅವುಗಳ ಜಲಾನಯನ ಪ್ರದೇಶಗಳ ವಿಸ್ತೀರ್ಣ
ಘಟಪ್ರಭಾ 88290 ಚ.ಕಿ.ಮೀ
ಭೀಮ 70,614 ಚ.ಕಿ.ಮೀ
ತುಂಗಭದ್ರಾ 47,866 ಚ.ಕಿ.ಮೀ
ಮಲಪ್ರಭಾ 11,549 ಚ.ಕಿ.ಮೀ
ಕೊಯ್ನಾ, ದೋಣಿ, ದಿಂದಿ, ಪಲೇರು, ಅಕೇರು, ಯೆರ್ಲಾ, ಪಂಚಗಂಗಾ, ದೂಧಗಂಗಾ, ಹಿರಣ್ಯಕೇಶಿ, ವರ್ಣ, ಮೂಸಿ ಇವು ಕೃಷ್ಣಾನದಿಯ ಇತರ ಪ್ರಮುಖ ಉಪನದಿಗಳು.
ಕಾವೇರಿ ನದಿ
ಕಾವೇರಿ ನದಿಯನ್ನು ದಕ್ಷಿಣದ ಗಂಗೆ ಎನ್ನುವರು. ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ತಲಕಾವೇರಿಯ ಬಳಿ ಉಗಮಿಸುವ ಈ ನದಿ ಚಾಮರಾಜನಗರ ಜಿಲ್ಲೆಯ ಮೂಲಕ ತಮಿಳುನಾಡಿಗೆ ಹರಿದು ಕುಮಾರ ಪಟ್ಟಣಮ್ ಎಂಬಲ್ಲಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಕಾವೇರಿ ನದಿಯ ಒಟ್ಟು ಉದ್ದ 800 ಕಿ.ಮೀ. ಕರ್ನಾಟಕದಲ್ಲಿ 380 ಕಿ.ಮೀ ಮತ್ತು ತಮಿಳುನಾಡಿನಲ್ಲಿ 416 ಕಿ.ಮೀ ಹರಿಯುತ್ತದೆ. ಈ ನದಿಯ ಜಲಾನಯನ ಪ್ರದೇಶದ ವಿಸ್ತೀರ್ಣ 81,155 ಚ.ಕಿ.ಮೀಗಳು.
ಕೃಷ್ಣರಾಜಸಾಗರ ಅಣೆಕಟ್ಟನ್ನು ಹೇಮಾವತಿ ಮತ್ತು ಲಕ್ಷ್ಮಣತೀರ್ಥ ನದಿಗಳ ಸಂಗಮದ ಸ್ಥಳದಲ್ಲಿ ಕಟ್ಟಲಾಗಿದೆ.
ರಾಮನಗರ ಜಿಲ್ಲೆಯ ಕನಕಪುರದಲ್ಲಿ ಕಾವೇರಿ ಮತ್ತು ಅರ್ಕಾವತಿ ನದಿಗಳು ಸಂಗಮವಾಗುವ ಸ್ಥಳದಲ್ಲಿ ಕರ್ನಾಟಕ ಸರ್ಕಾರವು ಕುಡಿಯುವ ನೀರು ಮತ್ತು ಜಲವಿದ್ಯುತ್ ಗಾಗಿ ಮೇಕೆದಾಟು ಯೋಜನೆ ಹಾಕಿಕೊಂಡಿದೆ.
ಕಾವೇರಿ ನದಿಯು ಜಲಪಾತಗಳು
ಚುಂಚನಕಟ್ಟೆ ಜಲಪಾತ – ಮೈಸೂರು
ಗಗನಚುಕ್ಕಿ ಜಲಪಾತ (ಚಾಮರಾಜನಗರ) ಮತ್ತು ಭರಚುಕ್ಕಿ ಜಲಪಾತ (ಮಂಡ್ಯ)
ಹೊಗೆನಕಲ್ ಜಲಪಾತ – ಕರ್ನಾಟಕ ಮತ್ತು ತಮಿಳುನಾಡು ಗಡಿಭಾಗದಲ್ಲಿದೆ.
ಕಾವೇರಿ ನದಿಯ ಪಾತ್ರದಲ್ಲಿ ರಚನೆಯಾದ 3 ನದಿದ್ವೀಪಗಳು
ಶ್ರೀರಂಗಪಟ್ಟಣ (ಮಂಡ್ಯ), ಶಿವನ ಸಮುದ್ರ (ಮಂಡ್ಯ), ಶ್ರೀರಂಗಂ (ತಮಿಳುನಾಡು)
ವಿವಿಧ ರಾಜ್ಯಗಳಲ್ಲಿ ಕಾವೇರಿ ನದಿಯ ಜಲಾಯನ ಪ್ರದೇಶ
ತಮಿಳುನಾಡು 43,868 ಚ.ಕಿ.ಮೀ
ಕರ್ನಾಟಕ 34,273 ಚ.ಕಿ.ಮೀ
ಕೇರಳ 2,866 ಚ.ಕಿ.ಮೀ
ಪಾಂಡಿಚೆರಿ 148 ಚ.ಕಿ.ಮೀ
ಕಾವೇರಿಯ ಉಪನದಿಗಳು
ಶಿಂಶಾ, ಹೇಮಾವತಿ, ಅರ್ಕಾವತಿ, ಕಪಿಲಾ, ಕಬಿನಿ, ಲಕ್ಷ್ಮಣ ತೀರ್ಥ, ಲೋಕಪಾವನಿ, ಭವಾನಿ, ಹಾರಂಗಿ, ಅಮರಾವತಿ.
ಗೋದಾವರಿ
ಗೋದಾವರಿಯನ್ನು ವೃದ್ಧಗಂಗಾ ಎಂದು ಕರೆಯುವರು. ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರಯಂಬಕೇಶ್ವರ ಬಳಿ ಹುಟ್ಟುತ್ತದೆ ಮತ್ತು ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಅಂತರ್ವೇದಿ ಬಳಿ ಬಂಗಾಳ ಕೊಲ್ಲಿಗೆ ಸೇರುತ್ತದೆ.
1465 ಕಿಮೀ ಉದ್ದ ಇರುವ ಈ ನದಿಯು ಭಾರತದ ಎರಡನೇ ದೊಡ್ದ ನದಿ ಮತ್ತು ದಕ್ಷಿಣ ಭಾರತದ ಅತ್ಯಂತ ದೊಡ್ಡ ನದಿಯಾಗಿದೆ. ಈ ನದಿಯು ಕರ್ಣಾಟಕದಲ್ಲಿ 14,450 ಚ.ಕಿ.ಮೀ ಜಲಾನಯನ ಪ್ರದೇಶವನ್ನು ಹೊಂದಿದೆ.
ಗೋದಾವರಿಯು ಆಂಧ್ರಪ್ರದೇಶದ ರಾಜಮಂಡ್ರಿ ಬಳಿ ಗೌತಮಿ ಮತ್ತು ವಶಿಷ್ಟ ಎಂದು 2 ಭಾಗಗಳಾಗಿ ಹರಿಯುತ್ತದೆ. ಈ ನದಿಯ ಜಲಾನಯನ ಪ್ರದೇಶವು ಕಣಶಿಲೆಗಳಿಂದ (ಜಂಜ ಶಿಲೆಗಳು) ಕೂಡಿದ್ದು ಇದನ್ನು ಗೋಂಡ್ವಾನ ಟ್ರಾಪ್ ಎಂದು ಕರೆಯುವರು. ತೆಲಂಗಾಣದಲ್ಲಿ ಕಂಡುಬರುವ ಸಿಂಗರೇಣಿ ಈ ಪ್ರದೇಶದಲ್ಲಿನ ಪ್ರಮುಖ ಕಲ್ಲಿದ್ದಲು ಗಣಿಯಾಗಿದೆ.
ಪ್ರಮುಖ ಉಪನದಿಗಳು
ಧಾರ್ಣಾ, ವೈನ್ಗಂಗಾ, ಪ್ರಣಹಿತ, ಪೆಂಚ್, ಕನ್ಹಾನ್, ಶಬರಿ, ಮಾಂಜ್ರಾ, ಇಂದ್ರಾವತಿ, ವಾರ್ಧಾ, ಪೆನುಗಂಗಾ, ಪ್ರವರ, ಮುಲ, ಪೆದ್ದವಾಗು, ಬಿಂದುಸಾರ ಮುಂತಾದವು
ಇತರ ಪ್ರಮುಖ ನದಿಗಳು
ಝಾರ್ಖಾಂಡ್ - ಸುವರ್ಣರೇಖಾ, ದಕ್ಷಿಣ ಕೋಯಲ್
ಒಡಿಶಾ – ವೈತರಣೀ, ಋಷಿ ಕುಲ್ಯಾ
ಪಶ್ಚಿಮಕ್ಕೆ ಹರಿಯುವ ನದಿಗಳು
ನರ್ಮದಾ
ಈ ನದಿಯು ಛತ್ತೀಸ್‍ಘರ್ ನ ಮೈಕಲಾ ಶ್ರೇಣಿಯಲ್ಲಿ ಉಗಮವಾಗುತ್ತದೆ. 1312 ಕಿ.ಮೀ ದೂರ ಹರಿಯುವ ಈ ನದಿಯು 94,500 ಚ.ಕಿ.ಮೀ ಜಲಾನಯನ ಪ್ರದೇಶವನ್ನು ಒಳಗೊಂಡಿದೆ. ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಲ್ಲೇ ಇದು ಅತಿ ಉದ್ದವಾದ ನದಿಯಾಗಿದೆ.
ನರ್ಮದಾ ನದಿಯು ಮಧ್ಯಪ್ರದೇಶದಲ್ಲಿ ಧುವಂದರ್, ಕಪಿಲಧಾರಾ, ಸಹಸ್ರಧಾರಾ ಮತ್ತು ದೌನಧರ್ ಜಲಪಾತಗಳನ್ನು ಸೃಷ್ಟಿಸಿದೆ. ದೌನ್‍ಧರ್ ಜಲಪಾತವನ್ನು ಕ್ಲೌಡ್ಡ್ ಆಫ್ ಮಿಸ್ಟ್ ಎನ್ನುವರು. ಮತ್ತು ಈ ಜಲಪಾತವು ಮಾರ್ಬಲ್ ಶಿಲೆಗಳನ್ನು ಒಳಗೊಂಡಿರುವುದರಿಂದ ಮಾರ್ಬಲ್ ಜಲಪಾತ ಎಂದು ಕರೆಯುವರು.
ನರ್ಮದಾ ನದಿಗೆ ಮಧ್ಯಪ್ರದೇಶದಲ್ಲಿ ಇಂದಿರಾಸಾಗರ್, ಓಂಕಾರೇಶ್ವರ, ಬಾರ್ಗಿ ಮತ್ತು ಮಾಹೇಶ್ವರ ಜಲಾಶಯಗಳನ್ನು ಮತ್ತು ಗುಜರಾತ್‍ನಲ್ಲಿ ಸರ್ದಾರ್ ಸರೋವರ ಯೋಜನೆಯನ್ನು ನಿರ್ಮಿಸಲಾಗಿದೆ.
ಭಾರತದ ಭೌಗೋಳಿಕ ಕೇಂದ್ರವೆನಿಸಿದ ಜಬಲ್ಪುರ ನರ್ಮದಾ ನದಿಯ ದಡದ ಮೇಲಿದೆ
ಪ್ರಮುಖ ಉಪನದಿಗಳು
ಬರ್ನಾ, ಬುರ್ನೆರ್, ಕೋಲಾರ್, ಶಕ್ಕರ್, ದೂಧಿ, ಶೇರ್, ತಾವಾ, ಹೀರನ್, ಅರ್ಸಾಂಗ್
ತಪತಿ/ತಾಪಿ
ಮಧ್ಯಪ್ರದೇಶದ ಸಾತ್ಪುರ್ ಬೆಟ್ಟಗಳಲ್ಲಿ ಉಗಮವಾಗುತ್ತದೆ. ಈ ನದಿಯ ಉದ್ದ 724 ಕಿ.ಮೀ ಇದ್ದು 64,750 ಚ.ಕಿ.ಮೀ ಜಲಾನಯನ ಪ್ರದೇಶವನ್ನು ಒಳಗೊಂಡಿದೆ. ಗುಜರಾತಿನ ಸೂರತ್ ಈ ನದಿ ದಂಡೆಯ ಮೇಲಿನ ಪ್ರಮುಖ ನಗರವಾಗಿದೆ.
ತಪತಿ ನದಿಗೆ ಗುಜರಾತ್‍ನಲ್ಲಿ ಕಕ್ರಪಾರ, ಉಕೈ ಅಣೆಕಟ್ಟುಗಳನ್ನು ಮತ್ತು ಮಹಾರಾಷ್ಟ್ರದಲ್ಲಿ ಹಂತುರ್, ಗಿರ್ನಾ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ.
ಮಹದಾಯಿ
ಬೆಳಗಾವಿಯ ಬೀಮಘಡ ಎಂಬಲ್ಲಿ ಉಗಮವಾಗುತ್ತದೆ. ಈ ನದಿಯನ್ನು ಗೋವಾದಲ್ಲಿ ಮಾಂಡೋವಿ ಎಂತಲೂ, ಕರ್ನಾಟಕದಲ್ಲಿ ಮಹದಾಯಿ ಎಂತಲೂ ಕರೆಯುವರು. ಈ ನದಿಗೆ ಸಂಬಂಧಿಸಿದಂತೆ ಕರ್ನಾಟಕ ಜಾರಿಗೆ ತಂದ ಕಳಸಾ ಬಂಡೂರಿ ಯೋಜನೆ ಕುರಿತು ಕರ್ನಾಟಕ ಮತ್ತು ಗೋವಾ ರಾಜ್ಯಗಳ ಮಧ್ಯೆ ವಿವಾದವಿದೆ.
ಈ ನದಿಯ ದಡದಲ್ಲಿ ಗೋವಾದ ರಾಜಧಾನಿ ಪಣಜಿ ಮತ್ತು ಸಲೀಂ ಅಲಿ ಪಕ್ಷಿಧಾಮವಿದೆ. ಈ ನದಿಯಿಂದ ದೂದ್‍ಸಾಗರ್ ಮತ್ತ ವಜ್ರಪೋಹ ಜಲಪಾತಗಳು ಸೃಷ್ಟಿಯಾಗಿವೆ.
ಲೂನಿ/ಸಾಗರ್‍ಮತಿ
ರಾಜಸ್ತಾನದ ಅರಾವಳಿ ಪರ್ವತ ಶ್ರೇಣಿಯ ಸಾಂಬಾರ್ ಪರ್ವತದ ಬಳಿ ಉಗಮವಾಗಿ ಸು. 459 ಕಿ.ಮೀ ಹರಿದು ಗುಜರಾತ್ ಬಳಿ ಅರಬ್ಬೀ ಸಮುದ್ರವನ್ನು ಸೇರುವುದು.
1892 ರಲ್ಲಿ ಜೋದ್‍ಪುರ್ ಅರಸ ಜಶ್ವಂತ್ ಸಿಂಗ್ ಈ ನದಿಯ ನೀರನ್ನು ಬಳಸಿ ಜಶ್ವಂತ್ ಸಾಗರ ಎಂಬ ಕೃತಕ ಸರೋವರವನ್ನು ನಿರ್ಮಿಸಿದರು.
ಸುಕ್ರಿ, ಮಿಥ್ರಿ, ಬಂಡಿ, ಖಾರಿ, ಜವಾಯ್, ಗುಹಿಯಾ, ಹಾಗೂ ಸಾಗಿ ಇದರ ಪ್ರಮುಖ ಉಪನದಿಗಳು
ಸಾಬರಮತಿ
ರಾಜಸ್ತಾನದ ಅರಾವಳಿ ಪರ್ವತ ಪ್ರದೇಶಗಳಲ್ಲಿ ಉಗಮಿಸಿ 371 ಕಿ.ಮೀ ಹರಿದು ಗುಜರಾತ್ ಬಳಿ ಅರಬ್ಬಿ ಸಮುದ್ರವನ್ನು ಸೇರುತ್ತದೆ, ಈ ನದಿಯ ಒಟ್ಟು ಜಲಾನಯನ ಪ್ರದೇಶ 18.750 ಚ.ಕಿ.ಮೀ
ಈ ನದಿಗೆ ಗುಜರಾತಿನಲ್ಲಿ ಸಾಬರ್‍ಮತಿ ಯೋಜನೆ, ಹಾತ್ಮತಿ ಮತ್ತು ಮೇಶ್ವೊ ಜಲಾಶಯಗಳನ್ನು ನಿರ್ಮಿಸಲಾಗಿದೆ.
ಅಹ್ಮದಾಬಾದ್ ನಗರವು ಸಾಬರ್‍ಮತಿ ನದಿ ದಂಡೆಯ ಮೇಲೆ ನಿರ್ಮಾಣವಾಗಿದೆ.
ಹಾತ್ಮತಿ, ವಾತ್ರಾಕ್, ವಾಕಲ್ ಮತ್ತು ಸಬರ್ ಇದರ ಪ್ರಮುಖ ಉಪನದಿಗಳಾಗಿವೆ
ಮಾಹಿನದಿ
ಮಧ್ಯಪ್ರದೇಶದ ವಿಂಧ್ಯಪರ್ವತಗಳಲ್ಲಿ ಈ ನದಿ ಉಗಮವಾಗುತ್ತದೆ. ಈ ನದಿಗೆ ಗುಜರಾತಿನಲ್ಲಿ ಕದಾನಾ ಡ್ಯಾಂ ಮತ್ತು ರಾಜಸ್ತಾನದಲ್ಲಿ ಮಾಹಿಬಜಾಜ್ ಸಾಗರ ಡ್ಯಾಂ ಗಳನ್ನು ನಿರ್ಮಿಸಲಾಗಿದೆ.
ಗುಜರಾತಿನ ವಡೋದರಾ ಮಾಹಿ ನದಿಯ ಮೇಲೆ ನಿಮಾಣವಾದ ಏಕೈಕ ಪ್ರಮುಖ ನಗರವಾಗಿದೆ
ಪೆರಿಯಾರ್
ಇದು ಕೇರಳದ ಜೀವನದಿಯಾಗಿದೆ. ಪಶ್ಚಿಮ ಘಟ್ಟಗಳ ಶಿವಗಿರಿ ಅರಣ್ಯಗಳಲ್ಲಿ ಉಗಮವಾಗಿ 225 ಕಿ,ಮಿ ಹರಿದು ಕೇರಳದ ಎರ್ನಾಕುಲಮ್ ಬಳಿ ಅರಬ್ಬಿಸಮುದ್ರ ಸೇರುವುದು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ