ಭೂಮಿಯ ರಚನೆ

 ಭೂಮಿಯ ರಚನೆ

1. ಭೂಚಿಪ್ಪು

ಸಾಗರಿಕ ಭೂಚಿಪ್ಪು ಮತ್ತು ನೆಲ ಭೂಚಿಪ್ಪು

ಭೂಚಿಪ್ಪು 60 ಕಿ.ಮೀನಷ್ಟು ದಪ್ಪವಿದೆ. ಇದನ್ನು ಸಿಯಾಲ್ ಮತ್ತು ಸೀಮಾ ಎಂದು 2 ಪದರಗಳಾಗಿ ವಿಂಗಡಿಸಲಾಗಿದೆ. 

ಭೂಮಿಯ ಮೇಲ್ಪದರದಿಂದ ಆಳಕ್ಕೆ 10 ಕಿ.ಮೀನಷ್ಟು ವಲಯ ಸಿಲಿಕಾನ್ ಮತ್ತು ಅಲ್ಯೂಮಿನಿಯಂಗಳನ್ನು ಒಳಗೊಂಡಿದೆ. ಸಿಲಿಕಾನ್ Si ಮತ್ತು ಅಲ್ಯೂಮಿನಿಯಂ Al ಗಳ ಮೊದಲೆರಡು ಅಕ್ಷರಗಳನ್ನು ಬಳಸಿ Sial ಎಂದು ಆ ವಲಯವನ್ನು ಕರೆಯಲಾಗಿದೆ. ಇದು ಮುಖ್ಯವಾಗಿ ಗ್ರಾನೈಟ್ ಶಿಲೆಗಳಿಂದ ಕೂಡಿದೆ.

10 ಕಿ.ಮೀ ನಿಂದ 60 ಕಿ.ಮೀವರೆಗಿನ ವಲಯ ಸಿಲಿಕಾನ್ ಮತ್ತು ಮೆಗ್ನೀಷಿಯಂಗಳನ್ನು ಒಳಗೊಂಡಿದೆ. ಸಿಲಿಕಾನ್ Si ಮತ್ತು ಮೆಗ್ನೀಷಿಯಂಗಳ Ma ಮೊದಲೆರಡು ಅಕ್ಷರಗಳನ್ನು ಬಳಸಿ Sima ಎಂದು ಆ ವಲಯವನ್ನು ಕರೆಯಲಾಗಿದೆ.

ಭೂಚಿಪ್ಪು ಮತ್ತು ಮ್ಯಾಂಟಲ್‍ಗಳನ್ನು ಮೊಹರೊವಿಸಿಕ್ ವಲಯವು ಬೇರ್ಪಡಿಸುತ್ತದೆ.

2. ಮಧ್ಯಪ್ರಾವರ (ಮ್ಯಾಂಟಲ್)

60 ರಿಂದ 100 ಕಿ.ಮೀ ವರೆಗೆ 100 ಕಿ.ಮೀ ನಿಂದ 2900 ಕಿ.ಮೀ ವರೆಗೆ ಈ ವಲಯ ವಿಸ್ತರಿಸಿದೆ. ಇದು ಭೂಮಿಯ ಒಟ್ಟು ಭಾಗದಲ್ಲಿ 80% ಹೊಂದಿದೆ. ಇಲ್ಲಿ ಮೆಗ್ನೀಷಿಯಂ ಮತ್ತು ಕಬ್ಬಿಣ ಹೆಚ್ಚಾಗಿ ಕಂಡುಬರುತ್ತದೆ. ಈ ಮಧ್ಯಗೋಳವು ಮಂದವಾದ ದ್ರವರೂಪದಲ್ಲಿದ್ದು ಇದನ್ನು 2 ಭಾಗಗಳಾಗಿ ವಿಂಗಡಿಸಲಾಗಿದೆ . ಅವು ಎಸ್ಥೆನೋಸ್ಪಿಯರ್ ಮತ್ತು ಮಿಸೋಸ್ಪಿಯರ್

ಎಸ್ಥೆನೋಸ್ಪಿಯರ್ 100 ಕಿ.ಮೀ ನಿಂದ 700 ಕಿ/ಮೀ ಆಳದವರೆಗೆ ಕಂಡುಬರುತ್ತದೆ. ಇದು ಮೇಣದಂತಹ ಮೆದುವಾದ ಪ್ರದೇಶವಾಗಿದ್ದು ಇಲ್ಲಿ ರೇಡಿಯೋ ವಿಕಿರಣಗಳು ಕಂಡುಬರುತ್ತವೆ.

ಮಿಸೋಸ್ಪಿಯರ್ 700 ಕಿ.ಮೀ ನಿಂದ 2900 ಕಿ.ಮೀ ಆಳದವರೆಗೆ ಕಂಡುಬರುತ್ತದೆ.

ಮಿಸೋಸ್ಪಿಯರ್ ನಂತರ ಗುಟೆನ್‍ಬರ್ಗ್ ಸೀಮಾವಲಯ ಕಂಡುಬರುತ್ತದೆ. ಇದು ಮಧ್ಯಗೋಳವನ್ನು ಕೇಂದ್ರಗೋಳದಿಂದ ಪ್ರತ್ಯೇಕಗೊಳಿಸುತ್ತದೆ.

3. ಕೇಂದ್ರಗೋಳ

2900 ಕಿ.ಮೀ ನಿಂದ 6370 ಕಿ.ಮೀ ವರೆಗೆ ಕಂಡುಬರುತ್ತದೆ. ಇಲ್ಲಿ ಪ್ರಮುಖವಾಗಿ ಕಬ್ಬಿಣ ಮತ್ತು ನಿಕ್ಕಲ್‍ಗಳು ಕಂಡುಬರುತ್ತವೆ. ಆದ್ದರಿಂದ ಈ ವಲಯವನ್ನು ನಿಫೆ (Nife) ಎನ್ನುವರು. ಕೇಂದ್ರಗೋಳವನ್ನು ಹೊರಕೇಂದ್ರಗೋಳ ಮತ್ತು ಒಳಕೇಂದ್ರಗೋಳ ಎಂದು 2 ಭಾಗಗಳಾಗಿ ಮಾಡಲಾಗಿದೆ.

ಹೊರಕೇಂದ್ರಗೋಳವು 2900 ರಿಂದ 5150 ಕಿ.ಮೀ ವರೆಗೆ ಇದ್ದು ಅತಿ ಉಷ್ಣಾಂಶದ ಕಾರಣದಿಂದಾಗಿ ಅರೆ ದ್ರವರೂಪದಲ್ಲಿದೆ. ಒಳಕೇಂದ್ರಗೋಳದಲ್ಲಿ ಅತಿ ಹೆಚ್ಚಿನ ಉಷ್ಣಾಂಶವಿದ್ದರೂ ಅತಿಹೆಚ್ಚಿನ ಒತ್ತಡದ ಕಾರಣದಿಂದ ಈ ವಲಯ ಘನರೂಪದಲ್ಲಿದೆ. ಜೊತೆಗೆ ಇಲ್ಲಿ ಯುರೇನಿಯಂನಂತಹ ವಿಕಿರಣಧಾತುಗಳು ಸಹ ಕಂಡುಬರುತ್ತವೆ.

ಶಿಲೆಗಳು

1. ಅಗ್ನಿಶಿಲೆ (ಇಗ್ನಿಯಸ್)

ಭೂಮಿಯ ಒಳಗಿಂದ ಲಾವಾರಸವು ಉಕ್ಕಿ ಮೇಲೆ ಹರಿದು ಬಂದು ನಂತರ ಗಟ್ಟಿಗೊಂಡಾಗ ಈ ಶಿಲೆಗಳು ರೂಪುಗೊಳ್ಳುತ್ತವೆ. ಲ್ಯಾಟಿನ್ ನ ಇಗ್ನಿಸ್ (ಬೆಂಕಿ) ಎಂಬ ಪದದಿಂದ ಈ ಶಿಲೆಗಳಿಗೆ ಈ ಹೆಸರು ಬಂದಿದೆ. ಈ ಶಿಲೆಗಳನ್ನು ಪ್ರಾಥಮಿಕ ಶಿಲೆ/ಮೂಲ ಶಿಲೆ ಎಂದು ಸಹ ಕರೆಯುವರು.

ಇವುಗಳಲ್ಲಿ ಅಂತಸ್ಸರಣ ಶಿಲೆ ಮತ್ತು ಬಹಿಸ್ಸರಣ ಶಿಲೆ ಎಂಬ ಎರಡು ವಿಧಗಳಿವೆ.

ಅಂತಸ್ಸರಣ ಶಿಲೆಗಳು

ಅಂತಸ್ಸರಣ ಶಿಲೆಗಳು ಭೂಮಿಯ ಅತ್ಯಂತ ಆಳದಲ್ಲಿ ರೂಪುಗೊಳ್ಳುತ್ತವೆ. ಉದಾ.. ಗ್ರಾನೈಟ್, ಗ್ಯಾಬೊ, ಪೆರಿಡೋಟೈಟ್, ಡೈಯೋರೈಟ್, ಡೊಲೊರೈಟ್ ಮುಂತಾದವು. ಈ ಆಂತಸ್ಸರಣ ಶಿಲೆಗಳಲ್ಲಿ ಸಹ ಅಂತರಾಗ್ನಿ ಶಿಲೆ ಮತ್ತು ಮಧ್ಯಾಂತರ ಶಿಲೆ (ಡೈಕ್) ಎಂಬ 2 ವಿಧಗಳಿವೆ.

ಮ್ಯಾಗ್ಮಾ (ದ್ರವರೂಪದ ಬೆಂಕಿ) ಭೂಮಿಯ ಒಳಗಿಂದ ಹೊರಗೆ ಉಕ್ಕಿ ಬರುವ ಸಂದರ್ಭದಲ್ಲಿ ಮಾರ್ಗಮಧ್ಯದಲ್ಲಿಯೇ ಹರಡಿ ತಂಪಾಗಿ ದೊಡ್ಡ ಹರಳುಗಳನ್ನು ಉತ್ಪತ್ತಿ ಮಾಡುತ್ತದೆ. ಇದನ್ನೇ ಅಂತರಾಗ್ನಿ ಶಿಲೆ ಎನ್ನುವರು. ಉದಾ.. ಗ್ರಾನೈಟ್ ಶಿಲೆ

ಕೆಲವೊಮ್ಮೆ ಮ್ಯಾಗ್ಮಾ ಭೂಮಿಯ ಒಳಗಿಂದ ಭೂಮಿಯ ಮೇಲ್ಪದರದ ಸಮೀಪದವರೆಗೂ ಉಕ್ಕಿ ಬಂದು ಸಣ್ಣ ಬಿರುಕುಗಳ ಮಧ್ಯ ಹರಿದು ತಂಪಾಗಿ ಸಣ್ಣ ಹರಳುಗಳನ್ನು ಸೃಷ್ಟಿ ಮಾಡುತ್ತದೆ. ಇಲ್ಲಿ ಉಂಟಾಗುವ ಶಿಲೆಗಳೆ ಮಧ್ಯಾಂತರ ಶಿಲೆಗಳು. ಈ ಮಧ್ಯಾಂತರ ಶಿಲೆಗಳು ಅಂತರಾಗ್ನಿ ಶಿಲೆಗಳಿಗಿಂತ ವೇಗವಾಗಿ ಸಾಂದ್ರೀಕರಣಗೊಳ್ಳುತ್ತವೆ. ಉದಾ.. ಡೊಲರೈಟ್, ಬಸಾಲ್ಟ್ ಇತ್ಯಾದಿ

ಬಹಿಸ್ಸರಣ ಶಿಲೆಗಳು

ಬಹಿಸ್ಸರಣ ಶಿಲೆಗಳು ಭೂಮಿಯ ಮೇಲ್ಪದರದಲ್ಲಿ ರೂಪುಗೊಳ್ಳುತ್ತವೆ. ಉದಾ.. ಬಸಾಲ್ಟ್, ಕಾಚುಗಲ್ಲು, ಧೂಸರ ಶಿಲೆ, ಪ್ರವಾಹ ಶಿಲೆ, ಉಶೈನೇಟ್ಸ್, ಟ್ರಾಕಿಟ್ಸ್, ಅಬಸಿಡಿಯನ್, ಮುಂತಾದವು

ಪದರು ಶಿಲೆ (ಸೆಡಿಮೆಂಟರಿ)

ಅಗ್ನಿಶಿಲೆಗಳ ನಂತರ ಉತ್ಪತ್ತಿಯಾಗುವುದರಿಂದ ದ್ವಿತೀಯ ಶಿಲೆಗಳೆಂದು ಮತ್ತು ಚಿಕ್ಕ ಚಿಕ್ಕ ಕಣಗಳು ಸೇರಿ ಶಿಲೆಗಳಾಗುವುದರಿಂದ ಇವುಗಳನ್ನು ಕಣ ಶಿಲೆಗಳೆಂದು ಕರೆಯುವರು. ಅಲ್ಲದೆ ಜಲಜ ಶಿಲೆ ಎಂಬ ಹೆಸರು ಸಹ ಇವಕ್ಕಿದೆ. 

ಭೂಮಿಯ ಮೇಲಿನ ಶಿಲೆಗಳು ಗಾಳಿಮಳೆ ಇತ್ಯಾದಿ ಹವಾಮಾನದ ಕಾರಣಗಳಿಂದ ಶಿಥಿಲಗೊಂಡು ಆ ಶಿಲೆಗಳ ಕಣಗಳು ಹರಿಯುವ ನೀರಿನ ಮೂಲಕ ಅಥವಾ ಗಾಳಿಯ ಮೂಲಕ ಒಂದು ತಗ್ಗಾದ ಸ್ಥಳದಲ್ಲಿ ಸೇರಿಕೊಳ್ಳುತ್ತವೆ. ಕಾಲಾನುಕ್ರಮದಲ್ಲಿ ಆ ಕಣಗಳಲ್ಲಿನ ಕಬ್ಬಿಣದ ಆಕ್ಸೈಡ್ ಹಾಗೂ ಕ್ಯಾಲ್ಷಿಯಂಗಳ ಕಾರಣದಿಂದ ಆ ಕಣಗಳು ಒಂದಕ್ಕೊಂದು ಬೆಸೆದುಕೊಂಡು ಶಿಲೆಗಳಾಗುತ್ತವೆ.

ಪದರು ಶಿಲೆಗಳ ಪ್ರಕಾರಗಳು

ಭೌತಿಕವಾಗಿ

ರುಡೇಸಿಯಸ್ ಶಿಲೆಗಳು : ಜೇಡಿಮಣ್ಣು ಮತ್ತು ಸುಣ್ಣದ ಕಣಗಳಿಂದಾಗಿರುತ್ತವೆ. ಈ ಶಿಲೆಗಳಲ್ಲಿ ಸೂಕ್ಷ್ಮವಾದ ರಂಧ್ರಗಳಿದ್ದು ನೀರನ್ನು ಹಿಡದಿಟ್ಟುಕೊಳ್ಳಬಲ್ಲವು. ಉದಾ.. ಮೊನಚುಗಲ್ಲುಂಡೆ (ಬ್ರೆಸಿಯಾ) ಪೆಂಟೆಗಲ್ಲು (ಕಾಂಗ್ಲೋಮರೇಟ್)ರೇವೆಗಲ್ಲು

ಮರಳು ಶಿಲೆಗಳು : ಸಣ್ಣ ಹಾಗೂ ಒರಟಾದ ಮರಳಿನ ಕಣಗಳಿಂದಾದ ಶಿಲೆಗಳಾಗಿದ್ದು ಜೇಡಿ ಮತ್ತು ಸುಣ್ಣದ ಅಂಶಗಳನ್ನೊಳಗೊಂಡಿರುತ್ತವೆ.

ಮೃಣ್ಮಯ ಶಿಲೆಗಳು : ಜೇಡಿಮಣ್ಣಿನ ಕಣಗಳು ಮತ್ತು ಮಣ್ಣಿನ ಸೂಕ್ಷ್ಮ ಕಣಗಳಿಂದಾಗಿರುತ್ತವೆ. ಉದಾ.. ಜೇಡ್ ಶಿಲೆ

ಜೈವಿಕವಾಗಿ

ಸಸ್ಯಗಳು ಮತ್ತು ಸತ್ತ ಪ್ರಾಣಿಗಳು ಭೂಮಿಯ ಒಳಗೆ ಸೇರಿಕೊಂಡಾಗ ಅವುಗಳ ದೇಹ ಪೂರ್ತಿಯಾಗಿ ಮಣ್ಣಿನಲ್ಲಿ ಬೆರೆತುಹೋಗಿ ಅವುಗಳ ಅವಶೇಷಗಳು ಕಣಗಳಾಗಿ ರೂಪುಗೊಂಡು ಆ ಕಣಗಳ ಸಂಯೋಜನೆಯಿಂದ ಈ ಶಿಲೆಗಳು ರೂಪುಗೊಳ್ಳುತ್ತವೆ.

ಸುಣ್ಣದ ಕಲ್ಲು : ಕ್ಯಾಲ್ಸೈಟ್ ರೂಪದಲ್ಲಿನ ಕ್ಯಾಲ್ಸಿಯಂ ಕಾರ್ಬೋನೇಟ್ ಹೆಚ್ಚಾಗಿ ಕಂಡುಬರುವ ಶಿಲೆಯಾಗಿದೆ.

ಸೀಮೆಸುಣ್ಣ : ಶುದ್ಧರೂಪದ ಕ್ಯಾಲ್ಸೈಟ್ ಉಳ್ಳ ಮೃದುವಾದ ಪುಡಿರೂಪದ ಸೂಕ್ಷ್ಮ ಕಣಗಳುಳ್ಳ ಶಿಲೆಯಾಗಿದೆ.

ಕಲ್ಲಿದ್ದಲು ಭೂಮಿಯ ಒಳಗೆ ಹೂತುಹೋದ ಸಸ್ಯಗಳು ಕಾಲಾನುಕ್ರಮದಲ್ಲಿ ಒತ್ತಡದಿಂದ ಇಂಗಾಲವು ಸಮೃದ್ಧಿಯಾಗಿ ತುಂಬಿಕೊಂಡಿರುವ ಕಪ್ಪು ಅಥವಾ ಕಂದುಬಣ್ಣದ ಶಿಲೆಯಾಗಿ ರೂಪುಗೊಳ್ಳುತ್ತದೆ.

ರಾಸಾಯನಿಕವಾಗಿ

ಹರಿಯುವ ನೀರಿನ ಜೊತೆಗೆ ಕೆಲವು ರಾಸಾಯನಿಕ ಪದಾರ್ಥಗಳು ಸಹ ಹರಿದು ಬಂದು ಒಂದೆಡೆ ಶೇಖರಣೆಗೊಂಡು ಶಿಲೆಗಳಂತೆ ರೂಪುಗೊಳ್ಳುವವು. ಉದಾ ಜಿಪ್ಸಂ ಮತ್ತು ಕಪ್ಪುಕಲ್ಲು ಇತ್ಯಾದಿ

ರೂಪಾಂತರ ಶಿಲೆ

ಒಂದು ಶಿಲೆಯ ಬಣ್ಣ, ಗುಣ, ಖನಿಜಗಳ ಸಂಯೋಜನೆ, ಸಾಂಧ್ರತೆ ಹೀಗೆ ಎಲ್ಲ ವಿಷಯಗಳಲ್ಲಿ ಬದಲಾವಣೆಯಾಗಿ ಬೇರೊಂದು ಶಿಲೆಯಾಗಿ ಮಾರ್ಪಾಟಾದಾಗ ಅದನ್ನು ರೂಪಾಂತರ ಶಿಲೆ ಎನ್ನುವರು. 

ಗ್ರಾನೈಟ್ - ನೀಶ್ ಶಿಲೆ

ಸುಣ್ಣದ ಕಲ್ಲು  ಅಮೃತ ಶಿಲೆ

ರೇವೆಗಲ್ಲು - ಶಿಸ್ಟ್ ಶಿಲೆ

ಮರಳುಶಿಲೆ  ಕ್ವಾರ್ಟ್‍ಜೈಟ್

ಕಲ್ಲಿದ್ದಲು  ಗ್ರಾಫೈಟ್ ಇತ್ಯಾದಿ

ಕಾಮೆಂಟ್‌ಗಳು