ಪ್ರಪಂಚದ ವಿವಿಧ ವಾಯುಗುಣ ಪ್ರದೇಶಗಳು
ಪ್ರಪಂಚದ ವಿವಿಧ ವಾಯುಗುಣ ಪ್ರದೇಶಗಳು
ಸಮಭಾಜಕವೃತ್ತ ವಾಯುಗುಣ
ಈ ವಲಯವು ಸಮಭಾಜಕವೃತ್ತದಿಂದ ಉತ್ತರ ಮತ್ತು ದಕ್ಷಿಣದ ಕಡೆಗೆ 10 ಡಿಗ್ರಿ ಅಕ್ಷಾಂಶದವರೆಗೆ ಹರಡಿದೆ.
ಸೂರ್ಯನ ಕಿರಣಗಳು ನೇರವಾಗಿ ಬೀಳುವುದರಿಂದ ಇಲ್ಲಿ ವಾರ್ಷಿಕ ಉಷ್ಣಾಂಶ ಸರಾಸರಿ 27 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಹಗಲು ಅಧಿಕ ಉಷ್ಣಾಂಶದಿಂದ ಕೂಡಿದ್ದು ರಾತ್ರಿ ಹೊತ್ತು ವಿಕಿರಣಗಳಿಂದ ಉಷ್ಣಾಂಶವು ಕಡಿಮೆಯಾಗಿ ತಂಪಾಗಿರುತ್ತದೆ.
ಗಾಳಿಯು ಸಮತಲವಾಗಿ ಚಲಿಸುತ್ತದಲ್ಲದೆ ಅತಿಯಾದ ತೇವಾಂಶದಿಂದ ಕೂಡಿರುತ್ತದೆ. ಕರಾವಳಿ ಪ್ರದೇಶದಲ್ಲಿ ಹೆಚ್ಚು ಭೂಗಾಳಿ ಮತ್ತು ಸಮುದ್ರಗಾಳಿಗಳು ಬೀಸುತ್ತವೆ
ಈ ವಲಯದಲ್ಲಿ ಅಧಿಕ ಉಷ್ಣದಿಂದ ನೀರು ಕಾದು ಆವಿಯಾಗಿ ಸಂಜೆಯ ಹೊತ್ತಿಗೆ ಮಳೆಯಾಗಿ ಬೀಳುತ್ತದೆ. ಇಂತಹ ಮಳೆಯನ್ನು ಪರಿಸರಣ ಮಳೆ ಎನ್ನುವರು. ಅಲ್ಲದೆ ಈ ಪ್ರದೇಶದಲ್ಲಿ ವರ್ಷಾದ್ಯಂತ ಭಾರಿ ಮಳೆಯಾಗುತ್ತದೆ. ಮಾರ್ಚ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ 150 ರಿಂದ 300 ಸೆಂ.ಮೀ ವರೆಗೆ ಅತ್ಯಧಿಕ ಮಳೆಯಾಗುತ್ತದೆ.
ಇಲ್ಲಿ ಅಮೆಜಾನ್ ಅರಣ್ಯ/ಸೆಲ್ವಾಸ್ ಮಾದರಿ ಕಾಡುಗಳು ಕಂಡುಬರುತ್ತವೆ. ಇವು ಸದಾ ಹಸಿರಾದ ನಿತ್ಯ ಹರಿದ್ವರ್ಣದ ಕಾಡುಗಳೆನಿಸಿವೆ. ಇಲ್ಲಿನ ದುರ್ಗಮ ಕಾಡುಗಳ ಕಾರಣದಿಂದ ಬೆಳಕು ಸರಿಯಾಗಿ ಭೂಮಿಗೆ ತಲುಪದೆ ಈ ಪ್ರದೇಶಗಳನ್ನು ಮಂದ ಬೆಳಕಿನ ಪ್ರದೇಶಗಳೆಂದು ಕರೆಯುವರು.
ರಬ್ಬರ್, ಎಬೋನಿ, ಮಹೋಗನಿ, ರೋಸ್ವುಡ್, ತಾಳೆ, ಕೋಕೊ, ಗಟಪರ್ಚ, ಸಿಂಕೋನಾ ಮುಂತಾದವು ಇಲ್ಲಿ ಬೆಳೆಯುವ ಪ್ರಮುಖ ಮರಗಳಾಗಿವೆ.
ಮರಗಪ್ಪೆ, ನಿದ್ರಾರೋಗ ಬರಿಸುವ ಟ್ಸೆಟ್ಸೆ ಎಂಬ ನೊಣ, ಅನಕೊಂಡ ಹಾವುಗಳು ಇಲ್ಲಿ ಕಂಡು ಬರುವ ವಿಶೇಷ ಜೀವಿಗಳಾಗಿವೆ
ದಕ್ಷಿಣ ಅಮೇರಿಕಾದ ಅಮೆಜಾನ್ ಅರಣ್ಯ, ಆಫ್ರಿಕಾದ ಕಾಂಗೊ ಮತ್ತು ಗಿನಿ ತೀರ, ಏಷ್ಯಾದ ಇಂಡೋನೇಷ್ಯಾ, ಪಪುವಾ ನ್ಯೂಗಿನಿಯ, ಬರ್ಮಾ, ಅಂಡಮಾನ್ ನಿಕೋಬಾರ್, ಶ್ರೀಲಂಕಾ ಮುಂತಾದವುಗಳು ಈ ವಲಯದಲ್ಲಿ ಕಂಡುಬರುವ ಪ್ರಮುಖ ಪ್ರದೇಶಗಳಾಗಿವೆ
ಅಮೆಜಾನ್ ನದಿ ಪ್ರದೇಶದ ರೆಡ್ ಇಂಡಿಯನ್ಸ್, ಕಾಂಗೋ ನದಿ ಪ್ರದೇಶದ ಪಿಗ್ಮಿಗಳು, ಪಪುವಾ ನ್ಯೂಗಿನಿಯಾದ ಪಪುವನ್ನರು (ತಲೆಬೇಟೆಗಾರರು), ಬೋರ್ನಿಯೋದ ಡಯಾಕ್ಸ್, ಮಲೇಷಿಯಾದ ಸೆಮಾಂಗ್ ಜನಾಂಗ ಇಲ್ಲಿ ಕಂಡುಬರುವ ಆದಿವಾಸಿಗಳಾಗಿದ್ದಾರೆ.
ಉಷ್ಣವಲಯದ ಮಾನ್ಸೂನ್ ವಾಯುಗುಣ
ಉತ್ತರದಲ್ಲಿ 10 ರಿಂದ 30 ಡಿಗ್ರಿ ಅಕ್ಷಾಂಶದವರೆಗೆ ಹಾಗೂ ದಕ್ಷಿಣದಲ್ಲಿ 10 ರಿಂದ 30 ಡಿಗ್ರಿ ಅಕ್ಷಾಂಶದವರೆಗೆ ಭೂಮಿಯ ಪೂರ್ವಾರ್ಧ ಗೋಳದಲ್ಲಿ ಈ ಪ್ರಕಾರದ ವಾಯುಗುಣ ಕಂಡುಬರುತ್ತದೆ. ಇಲ್ಲಿ ವಾರ್ಷಿಕ ಉಷ್ಣಾಂಶವು 29 ರಿಂಧ 32 ಡಿಗ್ರಿ ಸೆಲ್ಸಿಯಸ್ ಇರುತ್ತದೆ.
ಉತ್ತರಾರ್ಧಗೋಳವು ಸೂರ್ಯನ ಕಡೆಗೆ ವಾಲಿದ್ದಾಗ ಅತಿ ಉಷ್ಣದಿಂದ ಏಷ್ಯಾ ಖಂಡವು ಕಡಿಮೆ ಒತ್ತಡ ಪ್ರದೇಶವಾಗಿ ಮತ್ತು ಹಿಂದೂ ಮಹಾಸಾಗರವು ಹೆಚ್ಚು ಒತ್ತಡ ಪ್ರದೇಶವಾಗಿ ಪರಿಣಮಿಸುತ್ತವೆ. ಈ ಸಮಯದಲ್ಲಿ ದಕ್ಷಿಣಾರ್ಧ ಗೋಳದಲ್ಲಿನ ಹಿಂದೂ ಮಹಾಸಾಗರದ ಮೇಲೆ ಬೀಸುವ ಮಾರುತಗಳು ಉತ್ತರದ ಕಡೆಗೆ ಬೀಸುತ್ತಾ ಬಂದು ವಿಚಲನಾ ಬಲದ ಪರಿಣಾಮವಾಗಿ ನೈಋತ್ಯ ಮಾನ್ಸೂನ್ ಮಾರುತಗಳಾಗಿ ಮಾರ್ಪಾಡಾಗುತ್ತವೆ.
ಮಾರುತಗಳು ಶೀತಕಾಲದಲ್ಲಿ ಸಮುದ್ರದ ಕಡೆಗೆ ಮತ್ತು ಉಷ್ಣಕಾಲದಲ್ಲಿ ಭೂಭಾಗದ ಕಡೆಗೆ ಬೀಸುತ್ತವೆ. ಇಲ್ಲಿ ಹೆಚ್ಚಾಗಿ ಪರ್ವತ ಮಳೆಯಾಗುತ್ತದೆ. ಆವರ್ತ ಮಳೆಯು ಕಡಿಮೆ ಪ್ರಮಾಣದಲ್ಲಿರುತ್ತದೆ.
ಈ ವಲಯಗಳಲ್ಲಿ ಭೂ ಪ್ರದೇಶಗಳು ಬೇಸಿಗೆಯಲ್ಲಿ ಅಧಿಕ ಉಷ್ಣದಿಂದ ಮತ್ತು ಚಳಿಗಾಲದಲ್ಲಿ ಬೆಚ್ಚಗೆ ಇರುತ್ತವೆ. ಮತ್ತು ಸಮುದ್ರ ತೀರ ಪ್ರದೇಶಗಳು ಬೇಸಿಗೆಯಲ್ಲಿ ತಂಪಾಗಿ ಹಾಗೂ ಚಳಿಗಾಲದಲ್ಲಿ ಬೆಚ್ಚಗೆ ಇರುತ್ತವೆ. ಚಳಿಗಾಲದಲ್ಲಿ ಗಾಳಿಯು ತೇವಾಂಶವಿಲ್ಲದೆ ಶುಷ್ಕವಾಗಿರುತ್ತದೆ (ಒಣಗಾಳಿ) ಆದರೆ ಮಳೆಗಾಲಕ್ಕೆ ಮುಂಚೆ ಗಾಳಿಯಲ್ಲಿ ತೇವಾಂಶ ಕಂಡುಬರುತ್ತದೆ.
ಈ ವಲಯದಲ್ಲಿ ಚಳಿಗಾಲ (ಅಕ್ಟೋಬರ್-ಜನವರಿ), ಮಳೆಗಾಲ (ಜೂನ್-ಸೆಪ್ಟೆಂಬರ್) ಮತ್ತು ಬೇಸಿಗೆಕಾಲ (ಫೆಬ್ರವರಿ-ಮೇ) ಎಂಬ 3 ಋತುಮಾನಗಳನ್ನು ಕಾಣುತ್ತೇವೆ.
ಶ್ರೀಗಂಧ, ಮಹಾಗನಿ, ದೇವದಾರು, ತೇಗ, ಸಾಲ್, ಐರ್ನ್ ವುಡ್, ಬಿದಿರು, ಸಿಂಕೋನ್ ಇಲ್ಲಿ ಬೆಳೆಯುವ ಪ್ರಮುಖ ಮರಗಳಾಗಿವೆ.
ಭಾರತ, ಬರ್ಮಾ, ಚೀನಾ, ಥಾಯ್ಲಾಂಡ್, ಉತ್ತರ ಆಸ್ಟ್ರಿಯಾ, ದಕ್ಷಿಣ ಅಮೇರಿಕಾ, ಬ್ರೆಜಿಲ್ ನ ಆಗ್ನೇಯ ಭಾಗಗಳು ಈ ವಲಯದಲ್ಲಿ ಕಂಡುಬರುವ ಪ್ರಮುಖ ಪ್ರದೇಶಗಳಾಗಿವೆ.
ಉಷ್ಣವಲಯದ ಹುಲ್ಲುಗಾವಲು ವಾಯುಗುಣ
ಸಮಭಾಜಕ ವೃತ್ತದಿಂದ ಉತ್ತರ ಮತ್ತು ದಕ್ಷಿಣಕ್ಕೆ 10 ರಿಂದ 20 ಡಿಗ್ರಿ ಅಕ್ಷಾಂಶದಲ್ಲಿ ಕಂಡುಬರುತ್ತದೆ. ಸಮಭಾಜಕ ವೃತ್ತ ವಲಯ ಮತ್ತು ಮರುಭೂಮಿ ಪ್ರದೇಶಗಳ ಸಂಗಮ ಪ್ರದೇಶದಲ್ಲಿ ಈ ತೆರನಾದ ವಾಯುಗುಣವಿರುತ್ತದೆ. ಸಮುದ್ರ ಪ್ರದೇಶದಿಂದ ದೂರ ಇರುವ ಇಲ್ಲಿನ ಪ್ರದೇಶಗಳಲ್ಲಿ ವರ್ಷಾದ್ಯಂತ ಅಧಿಕ ಉಷ್ಣ ವಿರುತ್ತದೆ,
ಇಲ್ಲಿ ಬೆಳೆಯುವ ಸಸ್ಯವರ್ಗವನ್ನು ಸುಡಾನ್ ಮಾದರಿ ಅಥವಾ ಸವನ್ನಾ ಮಾದರಿ ಸಸ್ಯವರ್ಗ ಎಂದು ಕರೆಯುವರು. ಈ ಪ್ರಕಾರದ ಹುಲ್ಲು ದಪ್ಪ ಮತ್ತು ಒರಟಾಗಿರುತ್ತದೆ. ಭಾಷ್ಪವಿಸರ್ಜನೆಯಿಂದ ತೇವಾಂಶ ನಷ್ಟವಾಗದಿರಲು ಇಲ್ಲಿನ ಸಸ್ಯಗಳು ತಮ್ಮ ಎಲೆಗಳನ್ನು ಉದುರಿಸುತ್ತವೆ. ಬಾವೋಬಾಬ್ ಮತ್ತು ಸೀಸೆ ಎಂಬ ವಿಶೇಷ ಗಿಡಗಳು ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ.
ಬ್ರೆಜಿಲ್ – ಕಂಪಾಸ್ ಹುಲ್ಲುಗಾವಲು
ಘಯಾನಾ - ಲಾನಾಸ್ ಹುಲ್ಲುಗಾವಲು
ಸೂಡಾನ್ - ಸವನ್ನಾ ಹುಲ್ಲುಗಾವಲು
ಆಫ್ರಿಕಾದ ಉಷ್ಣವಲಯದ ಹುಲ್ಲುಗಾವಲುಗಳಲ್ಲಿ ಸ್ವತಂತ್ರವಾಗಿ ವಿಹರಿಸುವ ಪ್ರಾಣಿ ಪಕ್ಷಿಗಳನ್ನು ನೋಡಲು ಸಫಾರಿಗಳಿವೆ.
ಈ ಪ್ರದೇಶಗಳು ವ್ಯಾಪಾರಿ ಗಾಳಿಗಳ (ವಾಣಿಜ್ಯ ಮಾರುತ) ವಲಯದಲ್ಲಿ ಕಂಡುಬರುವ್ಯದರಿಂದ ಇಲ್ಲಿ ಗಾಳಿ ಪ್ರಬಲವಾಗಿ ಬೀಸುತ್ತದೆ. ಪ್ರಬಲ ಪ್ರಚಲನ ಪ್ರವಾಹಗಳಿಂದ 25 ಸೆಂ.ಮೀ ನಿಂದ 35 ಸೆಂ.ಮೀ ವರೆಗಿನ ಸಾಧಾರಣ ಮಳೆ ಬೀಳುತ್ತದೆ.
ಕೀನ್ಯಾದಲ್ಲಿ ಕಿಕುಯೂ ಮತ್ತು ಟಾಂಗಾನಿಕಾ ಪ್ರದೇಶಗಳಲ್ಲಿ ಮಸಾಯಿ ಜನಾಂಗದವರು ವಾಸಮಾಡುತ್ತಾರೆ. ಇವರು ಝೆಬು ದನಗಳನ್ನು ಸಾಕುತ್ತಾರೆ. ನೈಜೀರಿಯಾದಲ್ಲಿ ಕಂಡುಬರುವ ಹೌಸಾಸ್ ಜನಾಂಗದವರು ಬೇಟೆಗಿಂತಲೂ ವ್ಯವಸಾಯಕ್ಕೆ ಪ್ರಾಧಾನ್ಯತೆ ನೀಡಿ ಜೀವಿಸುತ್ತಿದ್ದಾರೆ.
ಆಫ್ರಿಕಾದ ಸೂಡಾನ್, ಉಗಾಂಡ, ಮಲಾವಿ, ಟಾಂಜಾನಿಯಾ, ಜಾಂಬಿಯಾ, ಅಂಗೋಲಾ. ಜೈರ್, ಮೊಜಾಂಬಿಕ್, ಇಥಿಯೋಪಿಯಾ, ಕೀನ್ಯಾ, ಉಗಾಂಡ, ನೈಜೀರಿಯಾ. ದಕ್ಷಿಣ ಅಮೇರಿಕಾದ ಬ್ರೆಜಿಲ್ ಪ್ರಸ್ಥಭೂಮಿ, ಗಯಾನಾ, ಕೊಲಂಬಿಯಾ, ವೆನಿಜುವೆಲಾ, ಬೊಲಿವಿಯಾ ಮತ್ತು ಆಸ್ಟ್ರೇಲಿಯಾದ ಪಶ್ಚಿಮ ಭಾಗದಲ್ಲಿರುವ ಕ್ವೀನ್ಸ್‍ಲ್ಯಾಂಡ್ ಈ ವಾಯುಗುಣದ ವಲಯದಲ್ಲಿ ಕಂಡುಬರುವ ಪ್ರಮುಖ ಪ್ರದೇಶಗಳಾಗಿವೆ.
ಮರುಭೂಮಿ ವಾಯುಗುಣ
ಭೂಮಿಯ ಮೇಲೆ ಕಂಡುಬರುವ ಅತ್ಯಧಿಕ ಉಷ್ಣದ ಪ್ರದೇಶಗಳಾಗಿವೆ. ಅತಿ ಉಷ್ಣದ ಪ್ರದೇಶಗಳಲ್ಲಿ ಮಳೆ ಭೂಮಿಗೆ ಮುಟ್ಟುವ ಮುನ್ನ ಭಾಷ್ಪೀಭವನ ಉಂಟಾಗಿ ಮಳೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬೀಳುತ್ತದೆ. ಇಲ್ಲಿ ಮಳೆಯು ಕೇವಲ 10 ರಿಂದ 20 ಸೆಂ.ಮೀ ಮಾತ್ರ.
ಉಷ್ಣವಲಯಕ್ಕೆ ಅಂಟಿಕೊಂಡ ಮರುಭೂಮಿಗಳಲ್ಲಿ ಬೇಸಿಗೆಯಲ್ಲಿ ಮಳೆಯಾದರೆ ಮೆಡಿಟರೇನಿಯನ್ ಪ್ರದೇಶಕ್ಕೆ ಅಂಟಿಕೊಂಡ ಮರುಭೂಮಿಗಳಲ್ಲಿ ಚಳಿಗಾಲದಲ್ಲಿ ಮಳೆಯಾಗುತ್ತದೆ.
ಮರುಭೂಮಿ ವಲಯದ ವಿಧಗಳು
ಉಷ್ಣವಲಯದ ಮರುಭೂಮಿ : ಆಪ್ರಿಕಾದ ಸಹರಾ, ಕಲಹರಿ, ನಮೀಬ್ ಮರುಭೂಮಿಗಳು. ಏಷ್ಯಾದ ಅರೇಬಿಯಾ, ಇರಾನ್ ಮತ್ತು ಥಾರ್ ಮರುಭೂಮಿಗಳು. ಆಸ್ಟ್ರೇಲಿಯಾ ಮರುಭೂಮಿ. ಉತ್ತರ ಅಮೇರಿಕಾದ ಅರಿಜೋನಾ. ದಕ್ಷಿಣ ಅಮೇರಿಕಾದ ಚಿಲಿ ದೇಶದ ಅಟಕಾಮ ಮರುಭೂಮಿ
ಸಮಶೀತೋಷ್ಣ ವಲಯದ ಮರುಭೂಮಿಗಳು : ಇವುಗಳನ್ನು ಖಂಡಾಂತರ ಮರುಭೂಮಿಗಳು ಸಹ ಎನ್ನುವರು. ಮಂಗೋಲಿಯಾದ ಗೋಬಿ ಮರುಭೂಮಿ ಮತ್ತು ಟರ್ಕಿಯ ಪಟಗೋನಿಯ ಮರುಭೂಮಿ
ದೈನಿಕ ವ್ಯತ್ಯಾಸ ಹೆಚ್ಚಾಗಿದ್ದು ಹಗಲಿನಲ್ಲಿ ಅತ್ಯಧಿಕ ಉಷ್ಣ ಮತ್ತು ರಾತ್ರಿಯಲ್ಲಿ ಅತಿ ಕಡಿಮೆ ಉಷ್ಣಾಂಶವಿರುತ್ತದೆ. ರಾತ್ರಿಯ ತೀವ್ರ ತಂಪಿನ ಕಾರಣ ಬೆಳಗಿನ ಹೊತ್ತು ಹುಲ್ಲು ಪೊದೆಗಳ ಮೇಲೆ ಇಬ್ಬನಿ ಶೇಖರಣೆಯಾಗಿರುತ್ತದೆ. ಕೆಲವೆಡೆ ನೀರಿನ ಸಂಗ್ರಹಗಳಾದ ಓಯಸಿಸ್‍ಗಳು ಸಹ ಕಂಡುಬರುತ್ತವೆ. ಮರುಭೂಮಿಯಲ್ಲಿ ಇವೇ ಜೀವನಾಧಾರಗಳು.
ಕಳ್ಳಿಗಿಡ, ಕುರುಚಲು ಗಿಡಗಳು, ಖರ್ಜೂರ ಹೆಚ್ಚಾಗಿ ಇಲ್ಲಿ ಬೆಳೆಯುತ್ತವೆ. ತೇವಾಂಶ ಕಾಯ್ದುಕೊಳ್ಳಲು ಈ ಗಿಡಗಳು ಎಲೆಗಳನ್ನು ಉದುರಿಸುತ್ತವೆ ಮತ್ತು ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಮೃದುವಾದ ಕಾಂಡವನ್ನು ಹೊಂದಿರುತ್ತವೆ. ಇವುಗಳ ಬೇರಗಳು ತುಂಬಾ ಆಳದಲ್ಲಿರುತ್ತವೆ.
ಮರುಭೂಮಿಯ ಹಡಗು ಎಂದೇ ಹೆಸರಾದ ಒಂಟೆ, ನರಿ, ಜಿರಾಫೆ, ಅ್ಯಂಟಿಲೋಪ್ ಚಿರತೆ ಮತ್ತು ಉಷ್ಟ್ರಪಕ್ಷಿಗಳು ಇಲ್ಲಿ ಕಂಡುಬರುವ ಪ್ರಮುಖ ಜೀವಿಗಳಾಗಿವೆ.
ಮೆಡಿಟರೇನಿಯನ್ ವಾಯುಗುಣ
ಸಮಭಾಜಕ ವೃತ್ತದಿಂದ ಉತ್ತರ ಮತ್ತು ದಕ್ಷಿಣಕ್ಕೆ 30 ರಿಂದ 45 ಡಿಗ್ರಿ ವರೆಗೆ ಹಾಗೂ ಮೆಡಿಟರೇನಿಯನ್ ಸಮುದ್ರದ ಸುತ್ತಲೂ ಕಂಡುಬರುವ ಪ್ರದೇಶಗಳಲ್ಲಿ ಈ ಬಗೆಯ ವಾತಾವರಣವಿರುತ್ತದೆ.
ಈ ಪ್ರದೇಶಗಳು ವಾಣಿಜ್ಯ ಮಾರುತಗಳು (ವ್ಯಾಪಾರಿ ಗಾಳಿ) ಬೀಸುವ ವಲಯದಲ್ಲಿ ಕಂಡುಬರುತ್ತವೆ. ಮತ್ತು ಈ ಬಗೆಯ ವಾಯುಗುಣದ ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ಒಣಗಾಳಿ ಮತ್ತು ಚಳಿಗಾಲದಲ್ಲಿ ತೇವಾಂಶ ಸಹಿತ ಗಾಳಿ ಬೀಸುತ್ತವೆ. ಮತ್ತು ಇವು ಪ್ರಸಿದ್ಧ ಪ್ರವಾಸಿ ತಾಣಗಳಾಗಿ ಮಾರ್ಪಟ್ಟಿರುತ್ತವೆ.
ಮೆಡಿಟರೇನಿಯನ್ ವಾಯುಗುಣದ ಪ್ರದೇಶದಲ್ಲಿ ಆವರ್ತ ಮಾರುತಗಳಿಂದ ಮಳೆಯಾಗುತ್ತದೆ.
ಕಾರ್ಕ್, ಓಕ್, ಆಲಿವ್, ನೀಲಗಿರಿ, ಹಿಪ್ಪುನೇರಳೆ ಮುಂತಾದವು ಇಲ್ಲಿ ಬೆಳೆಯುವ ಪ್ರಮುಖ ಮರಗಳಾಗಿವೆ. ಮೆಡಿಟರೇನಿಯನ್ ಪ್ರದೇಶವನ್ನು ಜಗತ್ತಿನ ಹಣ್ಣಿನ ತೋಟ ಮತ್ತು ಜಗತ್ತಿನ ನಾಗರಿಕತೆಗಳ ತೊಟ್ಟಿಲು ಎಂದು ಕರೆಯುವರು.
ನೈರುತ್ಯ ಯುರೋಪ್, ಪಶ್ಚಿಮ ಕ್ಯಾಲಿಫೋರ್ನಿಯಾ, ದಕ್ಷಿಣ ಚಿಲಿಯ ಪಶ್ಚಿಮ ಭಾಗ, ನ್ಯೂಜಿಲ್ಯಾಂಡ್ ಮತ್ತು ದಕ್ಷಿಣ ಥಾಸ್ಮೇನಿಯ ಮುಂತಾದವುಗಳು ಮೆಡಿಟರೇನಿಯನ್ ವಾಯುಗುಣ ಹೊಂದಿರುವ ಪ್ರದೇಶಗಳು
ಪೂರ್ವಾರ್ಧ ಗೋಳದ/ಚೀನಾ ಮಾದರಿ ವಾಯುಗುಣ
ಭೂಮಿಯ ಪೂರ್ವಾರ್ಧ ಗೋಳದಲ್ಲಿ ಪೆಸಿಫಿಕ್ ಸಾಗರದುದ್ದಕ್ಕೂ ಅಂಟಿಕೊಂಡ ದೇಶಗಳ ಕರಾವಳಿ ತೀರದುದ್ದಕ್ಕೂ ಈ ಪ್ರಕಾರದ ವಾಯುಗುಣ ಕಂಡುಬರುತ್ತದೆ.
ಬೇಸಿಗೆಯಲ್ಲಿ ಹೆಚ್ಚು ಮಳೆ ಮತ್ತು ಚಳಿಗಾಲದಲ್ಲಿ ಕಡಿಮೆ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಪ್ರಚಲನ ಮಳೆಯಾಗುತ್ತದೆ ಮತ್ತು ಚಳಿಗಾಲದಲ್ಲಿ ಆವರ್ತ ಮಾರುತಗಳಿಂದ ಮಳೆಯಾಗುತ್ತದೆ.
ಸಮಶೀತೋಷ್ಣ ವಲಯದ ಹುಲ್ಲುಗಾವಲು ವಾಯುಗುಣ
ಸಮಭಾಜಕ ವೃತ್ತದಿಂದ ಉತ್ತರ ಮತ್ತು ದಕ್ಷಿಣಕ್ಕೆ 40 ರಿಂದ 55 ಡಿಗ್ರಿ ಅಕ್ಷಾಂಶದಲ್ಲಿ ಕಂಡುಬರುತ್ತದೆ. ಇಂತಹ ಪ್ರದೇಶಗಳು ಸಮುದ್ರ ತೀರಗಳಿಂದ ದೂರದಲ್ಲಿ ಖಂಡಗಳ ಒಳಭಾಗದಲ್ಲಿ ಕಂಡುಬರುತ್ತವೆ. ಚಳಿಗಾಲದಲ್ಲಿ ಉಷ್ಣಾಂಶ ನೀರು ಹೆಪ್ಪುಗಟ್ಟುವ ಬಿಂದುವಿಗಿಂತಲೂ ಕೆಳಗೆ ಹೊಗುತ್ತದೆ.
ಈ ಪ್ರದೇಶಗಳು ಪಶ್ಚಿಮ ಗಾಳಿಗಳ ಅಥವಾ ಪ್ರತಿವಾಣಿಜ್ಯ ಮಾರುತಗಳ ಪಟ್ಟಿಯಲ್ಲಿದ್ದರು ಸಹ ಖಂಡಗಳ ಒಳಭಾಗದಲ್ಲಿರುವುದರಿಂದ ಅತ್ಯಂತ ಕಡಿಮೆ ಮಳೆಯನ್ನು ಪಡೆಯುತ್ತವೆ. ಚಳಿಗಾಲಗಳಲ್ಲಿ ಒಣಗಾಳಿ ಬೀಸುತ್ತದೆ ಬೇಸಿಗೆಯಲ್ಲಿ ಅಲ್ಪ ಪ್ರಮಾಣದ ಮಳೆಯಾಗುತ್ತದೆ
ಪ್ರಮುಖ ಹುಲ್ಲುಗಾವಲುಗಳು
ಉತ್ತರ ಅಮೇರಿಕಾ - ಪ್ರೈರಿ (ಪ್ರಪಂಚದ ಗೋದಿಯ ಕಣಜ)
ದಕ್ಷಿಣ ಅಮೇರಿಕಾದ ಅರ್ಜೆಂಟೈನಾ - ಪಂಪಾಸ್
ಯುರೋಪ್ ನ ಹಂಗೇರಿ - ಪುಸ್ಟಿಸ್
ಯುರೇಷಿಯಾ - ಸ್ಟೆಪಿಸ್
ದಕ್ಷಿಣ ಆಫ್ರಿಕಾ – ವೈಲ್ಡ್
ಆಸ್ಟ್ರೇಲಿಯ – ಡೌನ್ಸ್
ವಿಲ್ಲೋ, ಆಲ್ಡರ್, ಪಾಪ್ಲರ್ ಮುಂತಾದವು ಇಲ್ಲಿ ಬಳೆಯುವ ಪ್ರಮುಖ ಮರಗಳಾಗಿವೆ
ಏಷ್ಯಾದ ಸ್ಟೆಪಿಸ್ ಹುಲ್ಲುಗಾವಲಿನಲ್ಲಿ ಕಿರ್ಘೀಸ್ ಜನಾಂಗ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಹೊಟೆಂಟೋ ಜನಾಂಗಗಳು ಕಂಡುಬರುತ್ತವೆ.
ಪಶ್ಚಿಮ ಯುರೋಪಿಯನ್/ಸಾಗರಿಕ ಪಶ್ಚಿಮ ಕರಾವಳಿ ವಾಯುಗುಣ
ವಾತಾವರಣವು ಯಾವಾಗಲೂ ದಟ್ಟ ಮಂಜಿನಿಂದ ಕೂಡಿದ್ದು ಈ ಪ್ರದೇಶಗಳಲ್ಲಿ ವರ್ಷಾದ್ಯಂತ ಮಳೆಯಾಗುತ್ತದೆ.
ಸಾಗರಗಳ ಕಾರಣದಿಂದ ಚಳಿಗಾಲ ಮತ್ತು ಬೇಸಿಗೆ ಕಾಲದಲ್ಲಿ ಉಷ್ಣಾಂಶವು ಹಿತಕರವಾಗಿರುತ್ತದೆ. ದೈನಿಕವಾಗಿ ಮತ್ತು ವಾರ್ಷಿಕವಾಗಿ ಉಷ್ಣಾಂಶದಲ್ಲಿ ಹೆಚ್ಚಿನ ಏರುಪೇರು ಉಂಟಾಗುವುದಿಲ್ಲ
ಈ ವಲಯವು ಪಶ್ಚಿಮ ಗಾಳಿಗಳ ಅಥವಾ ಪ್ರತಿವಾಣಿಜ್ಯ ಮಾರುತಗಳ ಪಟ್ಟಿಯಲ್ಲಿದ್ದು ಆವರ್ತ ಮಾರುತಗಳಿಂದ ಮಳೆಯನ್ನು ಪಡೆಯುತ್ತವೆ. ಅದರಲ್ಲೂ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಮಳೆಯಾಗುತ್ತದೆ. ಇಲ್ಲಿ ಬೇಸಿಗೆ ಕಾಲಕ್ಕಿಂತಲೂ ಚಳಿಗಾಲದಲ್ಲಿ ಹೆಚ್ಚು ಮಳೆಯಾಗುತ್ತದೆ.
ಅಟ್ಲಾಂಟಿಕ್ ಸಾಗರಕ್ಕೆ ಹೊಂದಿಕೊಂಡ ಯುರೋಪ್ ದೇಶಗಳ ಕರಾವಳಿ ತೀರಗಳು. ಉತ್ತರ ಅಮೇರಿಕಾದ ಕೆನಡಾ ಮತ್ತು ಯು.ಎಸ್.ಎ ಕರಾವಳಿ ತೀರಗಳು ಈ ಬಗೆಯ ವಾಯುಗುಣ ಹೊಂದಿರುವ ಪ್ರದೇಶಗಳಾಗಿವೆ.
ತಂಪು ಸಮಶೀತೋಷ್ಣ ವಲಯದ ಪೂರ್ವ ಕರಾವಳಿ ವಾಯಗುಣ
ಇದನ್ನು ಮಂಚೂರಿಯನ್ ವಾಯಗುಣ ಮತ್ತು ಸೇಂಟ್ ಲಾರೆನ್ಸ್ ವಾಯುಗುಣ ಎಂಬ ಹೆಸರುಗಳಿಂದ ಸಹ ಕರೆಯುವರು.
ಫೆಸಿಫಿಕ್ ಸಾಗರಕ್ಕೆ ಅಂಟಿಕೊಂಡ ರಷ್ಯಾ, ಚೀನಾ, ಜಪಾನ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ದೇಶಗಳ ಕರಾವಳಿ ತೀರಗಳಲ್ಲಿ ಈ ಬಗೆಯ ವಾಯುಗುಣವಿರುತ್ತದೆ.
ಈ ಪ್ರದೇಶಗಳಲ್ಲಿ ದೀರ್ಘಾವಧಿಯ ಹೆಪ್ಪುಗಟ್ಟುವ ಚಳಿಗಾಲ ಮತ್ತು ಅಲ್ಪಾವಧಿಯ ಹಿತಕರವಾದ ಬೇಸಗೆಯನ್ನು ಕಾಣುತ್ತೇವೆ.
ಟೈಗಾ ಪ್ರದೇಶ/ಕೋನಿಫೆರಸ್ ಕಾಡುಗಳ ವಾಯುಗುಣ
ಈ ವಲಯಗಳು ಧ್ರುವ ಪ್ರದೇಶಗಳಿಗೆ ಹತ್ತಿರದಲ್ಲಿ 55 ರಿಂದ 70 ಡಿಗ್ರಿ ಅಕ್ಷಾಂಶದಲ್ಲಿ ಕಂಡುಬರುತ್ತವೆ. ಹಾಗಾಗಿ ದೀರ್ಘವಾದ ಚಳಿಗಾಲ ಮತ್ತು ಅಲ್ಪಾವಧಿಯ ಬೆಚ್ಚಗಿನ ಬೇಸಿಗೆ ಈ ವಾಯುಗುಣದ ಪ್ರದೇಶಗಳ ವಿಶೇಷತೆಗಳಾಗಿವೆ. ಇಲ್ಲಿ ಕಂಡುಬರುವ ರಷ್ಯಾದ (ಸೈಬೀರಿಯಾ) ವರ್ಕೋಯಾನ್ಸ್ಕ್ ಪ್ರಪಂಚದಲ್ಲೇ ಅತಿ ಶೀತ ಪ್ರದೇಶವಾಗಿದೆ.
ಬೇಸಿಗೆ ಅಲ್ಪಾವಧಿಯ ಕಾಲದ್ದಾಗಿರುತ್ತದೆ ಹಾಗೂ ಚಳಿಗಾಲವು ದೀರ್ಘವಾಗಿರುತ್ತದೆ. ಮತ್ತು ರಾತ್ರಿಗಿಂತಲೂ ಹಗಲು ಹೊತ್ತು ದೀರ್ಘವಾಗಿರುತ್ತದೆ.
ವರ್ಷಾದ್ಯಂತ ಪಶ್ಚಿಮ ಗಾಳಿಗಳಿಂದ ಉತ್ತಮ ಮಳೆಯಾಗುತ್ತದೆ. ಚಳಿಗಾಲಕ್ಕಿಂತ ಬೇಸಿಗೆಯಲ್ಲಿ ಉತ್ತಮ ಮಳೆಯಾಗುತ್ತದೆ ಮತ್ತು ಒಳನಾಡಿನ ಭೂಭಾಗಗಳಿಗಿಂತ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಮಳೆಯಾಗುತ್ತದೆ.
ಪೈನ್, ಫರ್, ಸ್ಕ್ರೂಸ್, ಬರ್ಚ್, ಬೀಚ್, ಲಾರ್ಚ್, ಸಿಡಾರ್, ಹೆಮ್ಲಾಕ್ ಮುಂತಾದವು ಇಲ್ಲಿ ಬೆಳೆಯುವ ಪ್ರಮುಖ ಮರಗಳಾಗಿವೆ.
ಹಿಮಕರಡಿ, ಹಿಮತೋಳ, ಹಿಮಸಾರಂಗ, ಹಿಮ ಅಳಿಲು, ಹಿಮಸಿಂಹ, ಹಿಮ ಚಿರತೆ ಮುಂತಾದವು ಇಲ್ಲಿನ ಪ್ರಮುಖ ಪ್ರಾಣಿಗಳು
ಟಂಡ್ರಾ ವಾಯುಗುಣ
ಈ ವಾಯುಗುಣದ ಪ್ರದೇಶಗಳು ಉತ್ತರ ಮತ್ತು ದಕ್ಷಿಣದಲ್ಲಿ 70 ರಿಂದ 90 ಡಿಗ್ರಿ ಅಕ್ಷಾಂಶದವರೆಗೆ ಧ್ರುವಪ್ರದೇಶಗಳಲ್ಲಿ ಕಂಡುಬರುತ್ತವೆ. ಹಾಗಾಗಿ ಇವು ಅಧಿಕ ಶೀತವಲಯ ಪ್ರದೇಶಗಳಾಗಿವೆ.
ಚಳಿಗಾಲಕ್ಕಿಂತ ಬೇಸಿಗೆ ಕಾಲವು ಕಡಿಮೆ ಅವಧಿಯದ್ದಾಗಿರುತ್ತದೆ ಆದರೆ ಹಗಲು ಹೊತ್ತು ರಾತ್ರಿಗಿಂತಲೂ ದೀರ್ಘವಾಗಿರುತ್ತದೆ.
ಯಾವಾಗಲೂ ವಾತಾವರಣವು ಮಂಜುಮುಸುಕಿರುವುದರಿಂದ ಕಡಿಮೆ ಮಳೆಯಾಗುತ್ತದೆ.
ಲಿಲ್ಲಿ, ಪಪ್ಪಿ, ಬಟರ್ ಕಪ್, ತಿಫ್ಟ್ ಇಲ್ಲಿನ ಪ್ರಮುಖ ಸಸ್ಯವರ್ಗಗಳಾಗಿವೆ.
ಹಿಮಕರಡಿ, ಹಿಮತೋಳ, ಹಿಮಸಾರಂಗ, ಹಿಮ ಅಳಿಲು, ಹಿಮಸಿಂಹ, ಹಿಮ ಚಿರತೆ, ಮುಂತಾದವು ಇಲ್ಲಿನ ಪ್ರಮುಖ ಪ್ರಾಣಿಗಳು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ