ಭಾರತದ ಮಣ್ಣುಗಳು
ಭಾರತದ ಮಣ್ಣುಗಳು
ಮಣ್ಣಿನ ಕುರಿತ ಅಧ್ಯಯನವನ್ನು ಪೆಡಾಲಜಿ ಎನ್ನುವರು.
1. ಮೆಕ್ಕಲು ಮಣ್ಣು
ನದಿಗಳು ಪರ್ವತ ಪ್ರದೇಶದಿಂದ ತಂದು ಸಂಚಯಿಸಿರುವ ಮಣ್ಣಿಗೆ ಮೆಕ್ಕಲು ಮಣ್ಣು/ರೇವೆ ಮಣ್ಣು ಎಂದು ಹೆಸರು. ಉತ್ತರ ಭಾರತದ ಮೈದಾನ ಪ್ರದೇಶದಲ್ಲಿ ಕಂಡು ಬರುವ ಈ ಮೆಕ್ಕಲು ಮಣ್ಣು ವಿಸ್ತೀರ್ಣದಲ್ಲಿ ಮೊದಲ ಸ್ಥಾನದಲ್ಲಿದೆ.
ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ, ಪಂಜಾಬ್, ಹರ್ಯಾಣ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಈ ಮಣ್ಣು ಹೆಚ್ಚಾಗಿ ಕಂಡುಬರುತ್ತದೆ.
ನದಿಗಳು ಪರ್ವತ ಪ್ರದೇಶಗಳಿಂದ ಮಣ್ಣನ್ನು ಹೊತ್ತುತಂದು ಸಂಗ್ರಹ ಮಾಡುತ್ತಲೇ ಇರುತ್ತವೆ. ಹೊಸದಾಗಿ ಮಣ್ಣು ಬಂದು ಶೇಖರಣೆ ಆದಂತೆಲ್ಲಾ ಕೆಳಗಿರುವ ಮಣ್ಣು ಹಳೆಯದಾಗುತ್ತಾ ಹೋಗುತ್ತದೆ ಮೇಲಿರುವ ಮಣ್ಣು ಹೊಸದಾಗಿ ಶೇಖರಣೆಯಾಗುತ್ತಿರುತ್ತದೆ.
ಹಳೆಯ ಮೆಕ್ಕಲು ಮಣ್ಣನ್ನು ಭಂಗರ್ ಎಂದು ಕರೆಯುವರು ಈ ಮಣ್ಣಿನ ಕೆಳಗೆ ಸುಣ್ಣದ ಕಲ್ಲುಗಳು ರಚನೆಗೊಂಡಿರುತ್ತವೆ. ಈ ಸುಣ್ಣದ ಕಲ್ಲುಗಳನ್ನು ಕಂಕರ್ ಎನ್ನುತ್ತಾರೆ. ಈ ಕಂಕರ್ ಕಲ್ಲುಗಳನ್ನು ಸಿಮೆಂಟ್ ತಯಾರಿಕೆಯಲ್ಲಿ ಬಳಸುತ್ತಾರೆ.
ಹೊಸದಾಗಿ ಶೇಖರಣೆಗೊಂಡ ಮೆಕ್ಕಲು ಮಣ್ಣನ್ನು ಖದರ್ ಎಂತಲೂ ಕರೆಯುವರು. ಈ ಖದರ್ ಮಣ್ಣಿನಲ್ಲಿ ಸುಣ್ಣದ ಅಂಶ ಭಂಗರ್ ಮಣ್ಣಿಗಿಂತಲೂ ಕಡಿಮೆಯಿರುತ್ತದೆ. ಈ ಮಣ್ಣಿನ ಕಣಗಳಲ್ಲಿ ಸ್ವಲ್ಪ ಮಟ್ಟಿಗೆ ಸಾರಜನಕ ಸೇರಿಕೊಳ್ಳಲು ಅವಕಾಶವಿರುತ್ತದೆ.
ನದಿಗಳು ಉತ್ತರದ ಮಹಾಮೈದಾನವನ್ನು ಪ್ರವೇಶಿಸುವ ಮುನ್ನ ಹಿಮಾಲಯದ ತಪ್ಪಲಿನಲ್ಲಿ ದಪ್ಪನೆಯ ಶಿಲಾಚೂರುಗಳನ್ನು ಹೊತ್ತು ತಂದು ಸಂಗ್ರಹಿಸುತ್ತವೆ ಇದನ್ನು ಬಬರ್ ಎನ್ನುವರು.
ಈ ಮಣ್ಣಿನಲ್ಲಿ ಸುಣ್ಣ, ಪೊಟ್ಯಾಷ್ ಮತ್ತು ರಂಜಕ ಹೆಚ್ಚಾಗಿರುತ್ತದೆ ಆದರೆ ಸಾರಜನಕ ಮತ್ತು ಜೈವಿಕಾಂಶ ಕಡಿಮೆಯಿರುತ್ತದೆ. ಇಲ್ಲಿ ಬೆಳೆಯುವ ಪ್ರಮುಖ ಬೆಳೆಗಳೆಂದರೆ ಗೋದಿ, ಭತ್ತ, ಕಬ್ಬು & ಸಣಬು.
2. ಕಪ್ಪುಮಣ್ಣು
ಕಪ್ಪು ಮಣ್ಣನ್ನು ರೀಗರ್ ಮಣ್ಣು, ಲಾವಾ ಮಣ್ಣು, ಎರೆ ಮಣ್ಣು ಎಂದೆಲ್ಲಾ ಕರೆಯುವರು ಮತ್ತು ಕಪ್ಪು ಮಣ್ಣಿನ ಪ್ರದೇಶವನ್ನು ಡೆಕ್ಕನ್ ಟ್ರಾಪ್ ಎನ್ನುವರು. ಬಸಾಲ್ಟ್ ಎನ್ನುವ ಅಗ್ನಿಶಿಲೆಗಳ ಶಿಥಿಲಿಕರಣದಿಂದ ಕಪ್ಪುಮಣ್ಣು ಉತ್ಪತ್ತಿಯಾಗಿದೆ. ಇದರಲ್ಲಿ ಜೇಡಿಮಣ್ಣಿನ ಕಣಗಳು ಹೆಚ್ಚಾಗಿ ಕಂಡುಬರುತ್ತವೆ. ಈ ಮಣ್ಣು ಫಲವತ್ತಾಗಿದ್ದು ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಸಮರ್ಥವಾಗಿದೆ. ಮೆಕ್ಕಲು ಮಣ್ಣಿನ ನಂತರ ಕಪ್ಪುಮಣ್ಣು ವಿಸ್ತೀರ್ಣದಲ್ಲಿ ಎರಡನೇ ಸ್ಥಾನ ಹೊಂದಿದೆ.
ಈ ಮಣ್ಣು ಕಬ್ಬಿಣ, ಸುಣ್ಣ, ಕಬ್ಬಿಣದ ಆಕ್ಸೈಡ್, ಪೊಟ್ಯಾಷಿಯಂ, ಕ್ಯಾಲ್ಷಿಯಂ ಹಾಗೂ ಮೆಗ್ನೀಷಿಯಂ ಕಾರ್ಬೋನೇಟ್ಗಳನ್ನು ಅಧಿಕ ಪ್ರಮಾಣದಲ್ಲಿ ಒಳಗೊಂಡಿದೆ. ಸಾರಜನಕ, ರಂಜಕ ಮತ್ತು ಜೈವಿಕಾಂಶಗಳು ಕಡಿಮೆ ಪ್ರಮಾಣದಲ್ಲಿರುತ್ತವೆ.
ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಆಂಧ್ರಪ್ರದೇಶ, ಉತ್ತರ ಕರ್ನಾಟಕಗಳಲ್ಲಿ ಈ ಪ್ರಕಾರದ ಮಣ್ಣು ಕಂಡುಬರುತ್ತದೆ.
ಕಪ್ಪು ಮಣ್ಣಿನಲ್ಲಿ ಬೆಳೆಯುವ ಪ್ರಮುಖ ಬೆಳೆಗಳು ಹತ್ತಿ, ಜೋಳ, ಗೋದಿ, ಈರುಳ್ಳಿ. ಮೆಣಸಿನಕಾಯಿ, ಹೊಗೆಸೊಪ್ಪು, ತೊಗರಿ, ಎಣ್ಣೆಕಾಳು, ನಿಂಬೆ, ದ್ರಾಕ್ಷಿ ಮುಂತಾದವು. ವಿಶೇಷವಾಗಿ ಈ ಮಣ್ಣು ಹತ್ತಿ ಬೆಳೆಗೆ ಹೆಚ್ಚು ಉಪಯುಕ್ತವಾದುದು.
ಸಮಶೀತೋಷ್ಣ ವಲಯದಲ್ಲಿ ಹುಲ್ಲು ಸಂಪೂರ್ಣವಾಗಿ ಕೊಳೆಯದೆ ನಿರ್ಮಾಣವಾದ ಕಪ್ಪುಮಣ್ಣನ್ನು ಚೆರ್ನೋಜಂ ಎನ್ನುವರು.
3. ಕೆಂಪುಮಣ್ಣು
ಈ ಮಣ್ಣು ಸ್ಪಟಿಕ (ಗ್ರಾನೈಟ್) ಶಿಲೆಗಳ ಶಿಥಿಲೀಕರಣದಿಂದ ಉಂಟಾಗುತ್ತದೆ. ಈ ಮಣ್ಣಿನಲ್ಲಿ ಕಬ್ಬಿಣದ ಅಂಶವು ಕಬ್ಬಿಣದ ಆಕ್ಸೈಡ್ ಆಗಿ ಪರಿವರ್ತನೆ ಹೊಂದುವದರಿಂದ ಇದು ಕೆಂಪು ಬಣ್ಣವನ್ನು ಹೊಂದಿದೆ. ಕೆಂಪು ಮಣ್ಣು ವಿಸ್ತೀರ್ಣದಲ್ಲಿ ಮೂರನೇಯ ಸ್ಥಾನ ಹೊಂದಿದೆ.
ಈ ಮಣ್ಣಿನಲ್ಲಿ ಜೈವಿಕಾಂಶ, ಸಾರಜನಕ, ರಂಜಕ ಮತ್ತು ಸುಣ್ಣದ ಕೊರತೆಯಿರುತ್ತದೆ. ಆಮ್ಲದ ಪ್ರಮಾಣ ಮತ್ತು ಪೊಟ್ಯಾಷಿಯಂ ಪ್ರಮಾಣ ಹೆಚ್ಚಾಗಿರುತ್ತದೆ.
ಕರ್ನಾಟಕ ತಮಿಳುನಾಡಿನಲ್ಲಿ ಕೆಂಪು ಮಣ್ಣು ಹೆಚ್ಚಾಗಿ ಕಾಣಸಿಗುತ್ತದೆ.
ಈ ಮಣ್ಣಿನಲ್ಲಿ ಬೆಳೆಯುವ ಪ್ರಮುಖ ಬೆಳೆಗಳೆಂದರೆ ರಾಗಿ, ಹೊಗೆಸೊಪ್ಪು, ಎಣ್ಣೆಕಾಳು, ಕಬ್ಬು, ಹತ್ತಿ.
4. ಜಂಬಿಟ್ಟಿಗೆ/ಲ್ಯಾಟರೈಟ್ ಮಣ್ಣು
ಲ್ಯಾಟರೈಟ್ ಎಂದರೆ ಲ್ಯಾಟಿನ್ ಭಾಷೆಯಲ್ಲಿ ಇಟ್ಟಿಗೆ ಎಂದರ್ಥ. 200 ಸೆಂ.ಮೀ ಗಿಂತಲೂ ಹೆಚ್ಚು ಮಳೆ ಬೀಳುವ ಪಶ್ಚಿಮ ಘಟ್ಟಗಳು, ವಿಂಧ್ಯ, ಸಾತ್ಪುರ, ರಾಜಮಹಲ್ ಮತ್ತು ಪೂರ್ವಾಚಲ ಬೆಟ್ಟಗಳಲ್ಲಿ ಈ ಪ್ರಕಾರದ ಮಣ್ಣು ಕಂಡುಬರುತ್ತದೆ. ಜಂಬಿಟ್ಟಿಗೆ ಮಣ್ಣು ವಿಸ್ತೀರ್ಣದಲ್ಲಿ ನಾಲ್ಕನೇಯ ಸ್ಥಾನದಲ್ಲಿದೆ.
ಅತಿಯಾದ ಮಳೆಯ ಕಾರಣದಿಂದ ಈ ಮಣ್ಣಿನಲ್ಲಿನ ಜೈವಿಕಾಂಶವು ಕಡಿಮೆಯಾಗುತ್ತಾ ಹೋಗುತ್ತದೆ. ಈ ಮಣ್ಣಿನಲ್ಲಿ ಹೆಚ್ಚಾಗಿ ಕಾಣುವ ಕಬ್ಬಿಣದ ಆಕ್ಸೈಡ್ ಮತ್ತು ಅಲ್ಯೂಮಿನಿಯಂನ ಕಣಗಳು ಮಣ್ಣಿನ ಮೇಲ್ಪದರದಲ್ಲಿಯೇ ಉಳಿದು ಲ್ಯಾಟರೈಟ್ ಶಿಲೆಗಳಾಗಿ ಮಾರ್ಪಡುತ್ತವೆ. ಈ ಮಣ್ಣಿನಲ್ಲಿ ಸಾರಜನಕ ಮತ್ತು ರಂಜಕದ ಪ್ರಮಾಣ ಕಡಿಮೆಯಿರುತ್ತದೆ.
ಮುಖ್ಯವಾಗಿ ಪ.ಬಂಗಾಳ, ಒಡಿಶಾ, ಕರ್ನಾಟಕ, ಕೇರಳ, ಅಸ್ಸಾಂ ರಾಜ್ಯಗಳಲ್ಲಿ ಈ ಮಣ್ಣು ಕಂಡುಬರುತ್ತದೆ.
ಪ್ರಮುಖ ಬೆಳೆಗಳು ಕಾಫಿ, ಟೀ ಮತ್ತು ಇತರ ತೋಟಗಾರಿಕೆ ಬೆಳೆಗಳು
5. ಮರುಭೂಮಿ ಮಣ್ಣು
ಅತಿಕಡಿಮೆ ಮಳೆ ಮತ್ತು ಹೆಚ್ಚು ಉಷ್ಣಾಂಶವಿರುವ ಥಾರ್ ಮರುಭೂಮಿಯನ್ನೊಳಗೊಂಡ ರಾಜಸ್ತಾನ, ಪಂಜಾಬ್, ಹರಿಯಾಣ ಮತ್ತು ಗುಜರಾತ್‍ಗಳ ಪೂರ್ವಭಾಗ ಈ ಪ್ರದೇಶಗಳಲ್ಲಿ ಮರುಭೂಮಿ ಮಣ್ಣು ಕಂಡುಬರುತ್ತದೆ. ಇದು ವಿಸ್ತೀರ್ಣದಲ್ಲಿ ಐದನೇಯ ಸ್ಥಾನದಲ್ಲಿದೆ.
ಮರುಭೂಮಿ ಮಣ್ಣಿನ ಕಣಗಳ ನಡುವೆ ಅಧಿಕ ರಂಧ್ರತೆ ಇರುವುದರಿಂದ ಈ ಮಣ್ಣಿನ ಕಣಗಳಿಗೆ ನೀರನ್ನು ಅಥವಾ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇರುವುದಿಲ್ಲ. ನೀರು ಅತಿ ವೇಗವಾಗಿ ಬಸಿದುಹೋಗುತ್ತದೆ. ಮಣ್ಣಿನ ಕಣಗಳ ನಡುವೆ ಹೆಚ್ಚಿನ ಸ್ಥಳಾವಕಾಶ ಇರುವ ಕಾರಣ ಲವಣ, ಕ್ಷಾರ, ಸಾರಜನಕ ಮತ್ತು ರಂಜಕದ ಪ್ರಮಾಣ ಹೆಚ್ಚಾಗಿರುತ್ತದೆ.
ಪ್ರಮುಖ ಬೆಳೆಗಳು ಸಜ್ಜೆ ಮತ್ತು ಖರ್ಜೂರ
6. ಪರ್ವತ ಮಣ್ಣು
ಹಿಮಾಲಯ ಪರ್ವತ ಪ್ರದೇಶಗಳ ಇಳಿಜಾರು ಮತ್ತು ಪಾದಭೂಮಿಯಲ್ಲಿ ಕಂಡುಬರುವ ಈ ಮಣ್ಣಿನಲ್ಲಿ ಕೊಳೆತ ಜೈವಿಕಾಂಶಗಳು ಮತ್ತು ಸಾರಜನಕ ಅಧಿಕ ಪ್ರಮಾಣದಲ್ಲಿ ಕಂಡುಬರುತ್ತವೆ ಆದರೆ ಫಾಸ್ಪೇಟ್ ಪ್ರಮಾಣ ಕಡಿಮೆಯಿರುತ್ತದೆ. ಬೂದು ಬಣ್ಣದಲ್ಲಿರುವ ಈ ಮಣ್ಣು ಆಮ್ಲಿಯ ಪ್ರಕ್ರಿಯೆಯಿಂದ ಉಂಟಾಗಿದೆ. ಈ ಮಣ್ಣನ್ನು ಪೋಡ್ಜೋಲ್ ಮಣ್ಣು ಎಂದು ಸಹ ಕರೆಯುವರು. ಈ ಮಣ್ಣು ವಿಸ್ತೀರ್ಣದಲ್ಲಿ ಆರನೇಯ ಸ್ಥಾನದಲ್ಲಿದೆ.
ಹಿಮಾಲಯದ ಪಾದ ಬೆಟ್ಟಗಳು, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಬಿಹಾರ, ಪಶ್ಚಿಮ ಬಂಗಾಳ, ಅಸ್ಸಾಂ ಮುಂತಾದ ರಾಜ್ಯಗಳಲ್ಲಿ ಈ ಮಣ್ಣು ಹಂಚಿಕೆಯಾಗಿದೆ.
ಪ್ರಮುಖ ಬೆಳೆಗಳು ಕಾಫಿ, ಟೀ, ಸಾಂಬಾರ್ ಪದಾರ್ಥಗಳು ಇತ್ಯಾದಿ
7. ಜೌಗು ಮಣ್ಣು
ಲವಣಸಾರ (ಉಪ್ಪಿನಿಂದ ಕೂಡಿರುವ) ಮಣ್ಣು ಎಂಬುದು ಇದಕ್ಕಿರುವ ಇನ್ನೊಂದು ಹೆಸರು. ಈ ಮಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ಉಪ್ಪು, ಮೆಗ್ನೀಷಿಯಂ, ಕ್ಯಾಲ್ಷಿಯಂ, ಸೋಡಿಯಂ ಮತ್ತು ಸಲ್ಫ್ಯೂರಿಕ್ ಅಂಶ ಇರುವ ಕಾರಣ ಇದರ ಪಿ.ಎಚ್ ಮೌಲ್ಯವು 7 ಕ್ಕಿಂತ ಹೆಚ್ಚು ಇರುತ್ತದೆ. ಈ ಮಣ್ಣಿಗೆ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿರುವುದಿಲ್ಲ.
ಪೂರ್ವ ಕರಾವಳಿ ತೀರ, ಅಂಡಮಾನ್ ನಿಕೋಬಾರ್ ತೀರಗಳಲ್ಲಿ ನದಿಗಳು ಸಮುದ್ರವನ್ನು ಸೇರುವ ಪ್ರದೇಶಗಳಲ್ಲಿ ಈ ಮಣ್ಣು ಕಂಡುಬರುತ್ತದೆ. ಈ ಮಣ್ಣಿನಲ್ಲಿ ಮ್ಯಾಂಗ್ರೋವ್ ಕಾಡುಗಳು ಬಳೆಯುಯತ್ತವೆ. ಈ ಕಾಡುಗಳನ್ನು ಗಂಗಾ ನದಿಮುಖಜ ಭೂಮಿ ಮತ್ತು ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ಕಾಣಬಹುದು.
ಟೀ, ಕಾಫಿ, ರಬ್ಬರ್ ಇಲ್ಲಿ ಬೆಳೆಯುವ ಪ್ರಮುಖ ಬೆಳೆಗಳಾಗಿವೆ.
8. ತೆರಾಯಿ ಮಣ್ಣು
ತೆರಾಯಿ ಮಣನ್ನು ಪೀಟ್ ಮಣ್ಣು ಎಂದು ಸಹ ಕರೆಯುವರು. ಜಮ್ಮು ಕಾಶ್ಮೀರ, ಪ.ಬಂಗಾಳ, ಉತ್ತರಾಖಂಡ, ಉತ್ತರ ಪ್ರದೇಶ, ಕೇರಳ, ತಮಿಳುನಾಡು ಮತ್ತು ಒಡಿಶಾ ರಾಜ್ಯಗಳಲ್ಲಿ ಕಂಡುಬರುತ್ತವೆ.
ಈ ಮಣ್ಣಿನಲ್ಲಿ ಸಸ್ಯಗಳು ಅರೆಬರೆ ಕೊಳೆತ ಸ್ಥಿತಿಯಲ್ಲಿರುವುದರಿಂದ ಇದನ್ನು ಸಸ್ಯಾಂಗಾರ ಮಣ್ಣು ಎನ್ನುವರು. ಈ ಮಣ್ಣಿನಲ್ಲಿ ಜೈವಿಕಾಂಶ ಮತ್ತು ಸಾರಜನಕ ಅಧಿಕವಾಗಿರುತ್ತದೆ. ಫಾಸ್ಪೇಟ್ ಪೊಟ್ಯಾಷ್ ಅಂಶಗಳು ಈ ಮಣ್ಣಿನಲ್ಲಿ ಕಡಿಮೆ ಪ್ರಮಾಣದಲ್ಲಿವೆ. ಈ ಮಣ್ಣು ಬೆಳೆಯನ್ನು ಬೆಳೆಯಲು ಅಷ್ಟು ಯೋಗ್ಯವಲ್ಲ.
ಮಣ್ಣು ಮತ್ತು ಪಿ.ಎಚ್ ಮೌಲ್ಯ
ಆಮ್ಲೀಯ ಮಣ್ಣು : ಪಿ.ಎಚ್ ಮೌಲ್ಯ 7 ಕ್ಕಿಂತ ಕಡಿಮೆ ಇರುತ್ತದೆ.
ಕ್ಷಾರೀಯ ಮಣ್ಣು : ಪಿ.ಎಚ್ ಮೌಲ್ಯ 7 ಕ್ಕಿಂತ ಹೆಚ್ಚು ಇರುತ್ತದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ